ವಿಜಯಸಾಕ್ಷಿ ಸುದ್ದಿ, ಗದಗ: ಹಿರಿಯ ಪ್ರಧಾನ/ಸಿಜೆಎಂ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಸಾಹಿತಿ ಎ.ಎಸ್. ಮಕಾನದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣದ, ಶಾಸಕ ರಿಜ್ವಾನ್ ಹರ್ಷದ ಮುಂತಾದ ಗಣ್ಯರ ಸಮ್ಮುಖದಲ್ಲಿ ವಿಧಾನಸೌಧದ ಬ್ಯಾಂಕ್ವಟ್ ಹಾಲ್‌ನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ `ಸರ್ವೋತ್ತಮ ಸೇವಾ ಪುರಸ್ಕಾರ’ ಪ್ರದಾನ ಮಾಡಿದರು.
2012ರಿಂದ ಮಾನ್ಯ ಕರ್ನಾಟಕ ಸರ್ಕಾರ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ ಮತ್ತು ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪುರಸ್ಕಾರ ನೀಡುವ ಯೋಜನೆ ಜಾರಿಗೆ ತಂದಿದ್ದು, ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಮಕಾನದಾರ ಭಾಜನರಾಗಿದ್ದು, ನ್ಯಾಯಾಂಗ ಇಲಾಖೆಯ ಇತಿಹಾಸದಲ್ಲಿಯೇ ಇಲಾಖಾವಾರು ರಾಜ್ಯ ಮಟ್ಟದ ಪುರಸ್ಕಾರಕ್ಕೂ ಭಾಜನರಾಗಿದ್ದಕ್ಕೆ ಇಲಾಖೆಗೆ ವಿಶೇಷ ಗರಿ ಮೂಡಿದಂತಾಗಿದೆ.
ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಅಧೀನ ನ್ಯಾಯಾಲಯಗಳ ನ್ಯಾಯಧೀಶರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನ್ಯಾಯಾಂಗ ಇಲಾಖೆಯ ಸಹೋದ್ಯೋಗಿ ಮಿತ್ರರು, ಗದಗ ಜಿಲ್ಲೆಯ ಸಾಹಿತಿ ಮಿತ್ರರ ಸಹಕಾರ, ಇಲಾಖೆಯ ಹಿರಿಯ ಅಧಿಕಾರಿಗಳು ಮಾರ್ಗದರ್ಶನವೇ ಈ ಪುರಸ್ಕಾರಕ್ಕೆ ಮುಖ್ಯ ಕಾರಣವೆಂಬುದು ಸಾಹಿತಿ ಮಕಾನದಾರರ ಅಭಿಮತ.
ಗದಗ ಜಿಲ್ಲಾ ನ್ಯಾಯಾಂಗ ಇಲಾಖೆಯ ನೌಕರರ ಸಂಘ ಮತ್ತು ಜಿಲ್ಲಾ ನೌಕರರ ಸಹಕಾರಿ ಪತ್ತಿನ ಸಂಘದ ಪದಾಧಿಕಾರಿಗಳು ಪ್ರಶಸ್ತಿ ಪುರಸ್ಕೃತ ಮಕಾನದಾರರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.