ಗದಗ: ಲಕ್ಕುಂಡಿ ಗ್ರಾಮದ ಶಾವಿಗಿ ಭರಮಪ್ಪನ ಕಟ್ಟೆ ಬಳಿ ಹೆಡೆ ಎತ್ತಿ ಕುಳಿತ ಘಟಸರ್ಪವನ್ನು 25 ವರ್ಷಗಳ ಹಿಂದೆ ಕಣ್ಣಾರೆ ಕಂಡಿದ್ದೇನೆ ಎಂದು ಬಸಪ್ಪ ಬಡಿಗೇರ ಹೇಳಿದ್ದಾರೆ. ಈ ಭಯಾನಕ ದೃಶ್ಯ ಇಂದಿಗೂ ನನ್ನನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ.
ಆಲದ ಮರದ ಕೆಳಗೆ, ಬೀಸುಕಲ್ಲಿನ ಆಕಾರದಲ್ಲಿ ಹೆಡೆ ಎತ್ತಿ ಕುಳಿತಿದ್ದ ಘಟಸರ್ಪವನ್ನು ಕಂಡು ಕೈಯಲ್ಲಿದ್ದ ಚೆಂಬನ್ನು ಬಿಟ್ಟು ಭಯದಿಂದ ಓಡಿ ಮನೆಗೆ ಹೋಗಿದ್ದೆ ಎಂದು ಬಸಪ್ಪ ವಿವರಿಸಿದ್ದಾರೆ.
ಘಟಸರ್ಪವು ಸುಮಾರು ಆರು ಅಡಿ ಉದ್ದವಿತ್ತು. ಆ ದೃಶ್ಯ ನೋಡಿ ‘ಶಿವ ಶಿವ ಪರಮಾತ್ಮ’ ಎಂದು ಹೇಳಿಕೊಂಡು ಅಲ್ಲಿಂದ ಓಡಿ ಬಂದೆ ಎಂದು ನೆನಪಿಸಿಕೊಂಡಿದ್ದಾರೆ.
ಶಾವಿಗಿ ಭರಮಪ್ಪನ ಕಟ್ಟೆಯ ಕೆಳಗೆ ಏಳು ಕೊಪ್ಪರಿಗೆ ಚಿನ್ನ ಇರುವುದು ಸತ್ಯ ಎಂದು ಹೇಳಿರುವ ಬಸಪ್ಪ, ನಿಧಿಯ ಕಾವಲಿಗಾಗಿ ಅಲ್ಲಿ ಎರಡು ಕೋಣಗಳು ಹಾಗೂ ಒಂದು ಘಟಸರ್ಪ ಇರುವುದಾಗಿ ಗ್ರಾಮಸ್ಥರಲ್ಲಿ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ನಿಧಿ ತೆಗೆಯಲು ಬಂದಾಗ ಮೊದಲು ಎರಡು ಕೋಣಗಳು, ನಂತರ ಘಟಸರ್ಪ ಕಾಣಿಸಿಕೊಳ್ಳುತ್ತದೆ ಎಂಬ ಮಾತುಗಳು ಹರಡಿವೆ.
ಇಂತಹ ನಿಧಿಯನ್ನು ತೆಗೆಯಲು ತಾಕತ್ತಿರುವ ಮಂತ್ರವಾದಿಯ ಅಗತ್ಯವಿದೆ ಎನ್ನುವ ನಂಬಿಕೆ ಇದೆ. ಸ್ವಾತಂತ್ರ್ಯ ನಂತರವೂ ನಿಧಿ ತೆಗೆಯಲು ಪ್ರಯತ್ನ ನಡೆದಿದ್ದು, ಆ ವೇಳೆ ಒಬ್ಬ ರಕ್ತಕಾರಿ ಮೃತಪಟ್ಟಿದ್ದಾನೆ ಎಂಬ ವದಂತಿಯೂ ಇದೆ. ಈ ಕಾರಣದಿಂದ ನಿಧಿ ತೆಗೆಯುವ ಪ್ರಯತ್ನ ವಿಫಲವಾಗಿ ಎಲ್ಲರೂ ಓಡಿ ಹೋಗಿದ್ದಾರೆ ಎಂದು ಬಸಪ್ಪ ಹೇಳಿದ್ದಾರೆ.ಲಕ್ಕುಂಡಿಯಲ್ಲಿ ಎಲ್ಲಿ ಅಗೆದರೂ ಬಂಗಾರ ಸಿಗುತ್ತದೆ ಎನ್ನುವ ಮಾತುಗಳು ಇಂದಿಗೂ ಗ್ರಾಮದಲ್ಲಿ ಕೇಳಿ ಬರುತ್ತಿವೆ.



