ಬೆಂಗಳೂರು:- ಇಂದು ಕರ್ನಾಟಕದ ಹಲವೆಡೆ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಅಕ್ರಮ ಆಸ್ತಿ ಗಳಿಕೆ ದೂರುಗಳು ಬಂದ ಹಿನ್ನೆಲೆ ದಾಳಿ ಮಾಡಿರುವ ಲೋಕಾ, ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬೆಂಗಳೂರಿನ 12 ಕಡೆ ಸೇರಿ ರಾಜ್ಯದ ಹಲವೆಡೆ ಏಕಕಾಲಕ್ಕೆ ದಾಳಿ ಮಾಡುವ ಮೂಲಕ ಭ್ರಷ್ಟರಿಗೆ ಲೋಕಾಯುಕ್ತ ಶಾಕ್ ಕೊಟ್ಟಿದೆ.
ಬೆಂಗಳೂರಿನಲ್ಲಿ 12, ತುಮಕೂರಿನಲ್ಲಿ 7, ಬೆಂಗಳೂರು ಗ್ರಾಮಾಂತರದಲ್ಲಿ 8, ಯಾದಗಿರಿಯಲ್ಲಿ 5, ಮಂಗಳೂರಿನಲ್ಲಿ 4 ಹಾಗೂ ವಿಜಯಪುರದಲ್ಲಿ 4 ಸ್ಥಳಗಳಲ್ಲಿ ಲೋಕಾ ದಾಳಿ ನಡೆಸಿದೆ.
ಎಲ್ಲೆಲ್ಲಿ?
ತುಮಕೂರಿನ ನಿರ್ಮಾಣ ಕೇಂದ್ರದ ಯೋಜನಾ ನಿರ್ದೇಶಕ ರಾಜಶೇಖರ್, ದಕ್ಷಿಣ ಜಿಲ್ಲೆಯ ಸರ್ವೇ ಮೇಲ್ವಿಚಾರಕ ಮಂಜುನಾಥ್, ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಶ್ರೀಮತಿ ರೇಣುಕಾ, ಬೆಂಗಳೂರು ನಗರದ ನಗರ ಮತ್ತು ಗ್ರಾಮೀಣ ಯೋಜನಾ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕ ಮುರಳಿ ಟಿ.ವಿ, ಕಾನೂನು ಮಾಪನಶಾಸ್ತ್ರದ ಇನ್ಸ್‌ಪೆಕ್ಟರ್ ಎಚ್. ಆರ್. ನಟರಾಜ್, ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲ್ಲೂಕು ಕಚೇರಿಯ ಎಸ್‌ಡಿಎ ಅನಂತ್ ಕುಮಾರ್ , ಯಾದಗಿರಿಯ ಶಹಾಪುರ ತಾಲೂಕಿನ ಉಮಾಕಾಂತ ಎನ್ನುವವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
* ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿರುವ ಯಾದಗಿರಿ ಜಿಲ್ಲೆಯ ಶಹಾಪುರ ತಹಶೀಲ್ದಾರ್ ಉಮಾಕಾಂತ ಹಳ್ಳೆ ಮನೆಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನೆಲೆ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದೆ. ಇತ್ತ ಯಾದಗಿರಿ ಜಿಲ್ಲೆಯ ಶಹಾಪುರ ತಹಶೀಲ್ದಾರ್ ಕಚೇರಿ ಮೇಲೂ ದಾಳಿ ಮಾಡಲಾಗಿದೆ.
* ತುಮಕೂರಿನಲ್ಲಿ ಒಟ್ಟು ಏಳು ಕಡೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ನಿರ್ಮಿತಿ ಕೇಂದ್ರದ ಎಂಡಿ ರಾಜಶೇಖರ ಮತ್ತು ಅವರ ಸಹೋದರನ ಮನೆ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ.
* ಇನ್ನು ವಿಜಯಪುರ ನಗರದ ಸೆಂಟ್ ಜೋಸೆಫ್ ಶಾಲೆಯ ಹಿಂಭಾಗದಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತಾರ್ಲೆ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಎಸ್ಪಿ ಟಿ. ಮಲ್ಲೇಶ್ ಹಾಗೂ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.



