ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ನೀರು ಪೂರೈಕೆಯಲ್ಲಿ ತಾರತಮ್ಯ, ರಸ್ತೆಯಲ್ಲಿಯೇ ವೈಯಕ್ತಿಕ ಶೌಚಾಲಯ ನಿರ್ಮಾಣ, ನಿಗದಿತ ಸಮಯದೊಳಗೆ ಸಹಾಯಧನ ತಲುಪಿಸದಿರುವುದು ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳ ಕುರಿತು ಕಳೆದ ಮೂರು ದಿನಗಳಿಂದ ಇಲ್ಲಿಯ ವಿವಿಧ ಸಮುದಾಯ ಭವನದಲ್ಲಿ ನಡೆದ ವಾರ್ಡ್ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಸರಕಾರದ ಸಹಾಯ ಧನ ಪಡೆದು ರಸ್ತೆಯಲ್ಲಿಯೇ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದರಿಂದ ರೈತರ ಕೃಷಿ ಚಟುವಟಿಕೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು 11 ಮತ್ತು 7ನೇ ವಾರ್ಡಿನ ನಾಗರಿಕರು ದೂರಿದರು. ಅಂಬೇಡ್ಕರ ನಗರದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ, ಹೈಟೆಕ್ ಶೌಚಾಲಯಕ್ಕಾಗಿ ಒತ್ತಾಯಿಸಲಾಯಿತು. ನಿಗದಿತ ಸಮಯದಲ್ಲಿ ಸಭೆಯ ನೋಟಿಸ್ ಅಂಟಿಸಬೇಕು, ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗೆ ಕೇವಲ ಹೆಸರು ನೊಂದಾವಣಿ ಬೇಡ ಎಂದು 9ನೇ ವಾರ್ಡಿನ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಹಲವು ಓಣಿಯ ರಸ್ತೆಯಲ್ಲಿ ಹಿಂದಿನ ಅವಧಿಯಲ್ಲಿ ಕಳಪೆ ಮಟ್ಟದ ಸಿ.ಸಿ ರಸ್ತೆ ನಿರ್ಮಾಣದಿಂದ ಕಾಮಗಾರಿ ಮುಕ್ತಾಯದ ಕೆಲ ತಿಂಗಳಲ್ಲಿಯೇ ಕಿತ್ತು ಹೋಗಿದ್ದು, ಕಲ್ಲಿನ ಕಡಿ ಮಾತ್ರ ಉಳಿದಿದೆ. ಇದರಿಂದ ಮಕ್ಕಳು, ವಯೋವೃದ್ಧರಿಗೆ ನಡೆದಾಡುವಾಗ ಕಲ್ಲಿನ ಕಡಿಗಳು ಕಾಲಿಗೆ ನಾಟಿ ಗಾಯಗಳಾಗುತ್ತಿವೆ. ಈ ಸಿ.ಸಿ ರಸ್ತೆಯನ್ನು ಮರು ನಿರ್ಮಿಸಿಕೊಡಬೇಕು ಎಂದು 9 ಮತ್ತು 6ನೇ ವಾರ್ಡಿನ ನಾಗರಿಕರು ಒತ್ತಾಯಿಸಿದರು.
ಮಳೆ ಮತ್ತು ಗಟಾರು ನೀರು ಹಲವು ವರ್ಷಗಳಿಂದ ನಮ್ಮ ಸ್ವಂತ ಜಾಗದಲ್ಲಿ ಹಾಕಿದ ಬಣವಿಯ ಸ್ಥಳದಲ್ಲಿ ನಿಲ್ಲುವುದರಿಂದ ಪ್ರತಿ ವರ್ಷ ಮೇವು ಕೆಡುತ್ತಿದೆ. ಗಟಾರು ನೀರು ವಾಸನೆಯಿಂದ ವಾಸ ಮಾಡುವುದಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವು ಸಲ ಗ್ರಾ.ಪಂಗೆ ತಿಳಿಸಿದರೂ ಸಹ ಪ್ರಯೋಜನವಾಗುತ್ತಿಲ್ಲ ಎಂದು 7ನೇ ವಾರ್ಡಿನ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾ.ಪಂ ಆಸ್ತಿ ಮಕ್ಕಳಿಗೆ, ಸಹೋದರರಿಗೆ ಹಂಚಿಕೆಯಾಗುತ್ತಿವೆ. ಭೂ ಭಾಡಿಗೆ ನಿಯಮಾವಳಿ ಪ್ರಕಾರ ಗ್ರಾ.ಪಂನ ದೊಡ್ಡ ಆಸ್ತಿಯು ಮತ್ತೊಬ್ಬ ಅರ್ಹರಿಗೆ ಉದ್ಯೋಗ ಮಾಡಲು ದೊರೆಯಬೇಕು. ಈ ಬಗ್ಗೆ ಅಧಿಕಾರಿಗಳು, ಗ್ರಾ.ಪಂ ಆಡಳಿತ ಕ್ರಮ ಜರುಗಿಸಬೇಕು ಎಂದು 3ನೇ ವಾರ್ಡಿನ ನಾಗರಿಕರು ಒತ್ತಾಯಿಸಿದರು. ಅತ್ತಿಮಬ್ಬೆ ಸ್ಮಾರಕ ಭವನ ನಿರ್ಮಿಸುವುದು ಸೇರಿದಂತೆ ಹಲವು ವೈಯಕ್ತಿಕ ಮತ್ತು ಸಮುದಾಯ ಅಭಿವೃದ್ಧಿ ಕುರಿತು ಚರ್ಚೆ ನಡೆಯಿತು.
ಜೆಜೆಎಂ ಕಾಮಗಾರಿ ಅಪೂರ್ಣವಾಗಿರುವುದರಿಂದ ಸಮರ್ಪಕ ಕುಡಿವ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದ್ದು, ನೀರಿನ ತೊಂದರೆ ಶೀಘ್ರ ಬಗೆಹರಿಸಲಾಗುವುದು. ನೀರನ್ನು ವ್ಯರ್ಥ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅವಶ್ಯವಿರುವ ಕಡೆ ಹೈಟೆಕ್ ಶೌಚಾಲಯ ನಿರ್ಮಿಸಲಾಗುತ್ತಿದ್ದು, ಗ್ರಾಮದ ಸ್ವಚ್ಚತೆಗೆ ಸಹಕರಿಸಬೇಕು. ವಿಳಂಬವಾದರೂ ಸಹ ಪ್ರಮಾಣಿಕವಾಗಿ ಗ್ರಾಮದ ಅಭಿವೃದ್ಧಿ ಮಾಡಲು ಪ್ರಯತ್ನಿಸಲಾಗುತ್ತಿದ್ದು ಅ.೨ರಂದು ನಡೆಯುವ ಗ್ರಾಮ ಸಭೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಗ್ರಾ. ಪಂ ಅದ್ಯಕ್ಷ ಕೆ.ಎಸ್. ಪೂಜಾರ ವಿನಂತಿಸಿಕೊಂಡರು.
ತುಂಗಾಭದ್ರಾ ನದಿ ನೀರು ತುಂಬಿಸಿರುವ ಐತಿಹಾಸಿಕ ಹಾಲಗೊಂಡ ಬಸವೇಶ್ವರ ಕೆರೆಗೆ ಗ್ರಾಮದ ಬಚ್ಚಲು, ಕೊಳಚೆ, ಶೌಚಾಲಯದಿಂದ ಹರಿಯುವ ನೀರು ಗಟಾರು ಮೂಲಕ ಸೇರುತ್ತದೆ. ಇದರಿಂದ ನೀರು ಮಲಿನವಾಗಿದೆ. ಇದರಲ್ಲಿ ದನ-ಕರುಗಳು ಸ್ನಾನ ಮಾಡುತ್ತಿದ್ದು, ರೋಗಗಳು ಅಂಟಿಕೊಳ್ಳುತ್ತಿವೆ. ಕೊಳಚೆ ನೀರು ಹೋಗಲು ಬೇರೆ ವ್ಯವಸ್ಥೆ ಕಲ್ಪಿಸಿ ಎಂದು 3ನೇ ವಾರ್ಡಿನ ನಾಗರಿಕರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಕೊಳಚೆ ನೀರು ಇಂಗಿಸಿ ತಿಳಿ ನೀರು ಮಾತ್ರ ಕೆರೆಗೆ ಸೇರಿಸುವ ಕಾಮಗಾರಿ ಆರಂಭವಾಗಿದೆ ಎಂದು ವಿವರಿಸಿದರು.