ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಹೊಸ ಬಸ್ ನಿಲ್ದಾಣದಲ್ಲಿ ಆಯೋಜಿಸಿರುವ, ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಏಪರ್ಡಿಸಿದ ಗ್ಯಾರಂಟಿ ಯೋಜನೆಗಳ ವಸ್ತುಪ್ರದರ್ಶನವನ್ನು ಸೋಮವಾರ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಉದ್ಘಾಟಿಸಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ, ಯುವನಿಧಿ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳ ಮಾಹಿತಿಯನ್ನು ಪ್ರದರ್ಶಿಸಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ಜಿಲ್ಲಾಧಿಕಾರಿಗಳು ಪ್ರಶಂಸಿಸಿದರು. ಮಾರ್ಚ್ 4ರಿಂದ 6ರವರೆಗೆ ಈ ವಸ್ತುಪ್ರದರ್ಶನ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ, ಗಣ್ಯರಾದ ಅಶೋಕ ಮಂದಾಲಿ, ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕ ವಿ.ಎಫ್. ಜಾಧವ ಹಾಜರಿದ್ದರು.
ವಿವಿಧ ಯೋಜನೆಗಳ ಮಾಹಿತಿ: ಮಹಿಳೆಯರಲ್ಲಿ ಸ್ವಾವಲಂಬನೆ ಹೆಚ್ಚಿಸಲು ಶಕ್ತಿ ಯೋಜನೆಯಡಿ 136 ಕೋಟಿ ಮಹಿಳೆಯರು, ಯುವತಿಯರು ಹಾಗೂ ವಿದ್ಯಾರ್ಥಿನಿಯರು ಉಚಿತ ಪ್ರಯಾಣ ಮಾಡುವುದರ ಮೂಲಕ `ಶಕ್ತಿ’ ಯೋಜನೆ ಮಹಿಳೆಯರ ಸಬಲೀಕರಣಕ್ಕೆ ಮಾದರಿಯಾಗಿದೆ.
ಪ್ರತಿ ಮನೆಯಲ್ಲಿಯೂ ಭಾಗ್ಯದ ಬೆಳಕು ಬೆಳಗಬೇಕು ಎನ್ನುವ ಆಶಯದಂತೆ `ಗೃಹಜ್ಯೋತಿ’ ಯೋಜನೆಯಡಿ ಪ್ರತಿ ಮನೆಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುವುದರ ಮೂಲಕ 5 ಕೋಟಿ ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ.
ಕರ್ನಾಟಕದ ಮಹಿಳೆಯರು ಸ್ವ-ಸಾಮರ್ಥ್ಯ, ಸ್ವಯಂ ಸ್ಥೆöರ್ಯ ಹಾಗೂ ಸ್ವಯಂ ಗೌರವದಿಂದ ಜೀವನ ಸಾಗಿಸಲು ಪ್ರತಿ ಮಾಹೆ ಪ್ರತಿ ಮಹಿಳೆಗೆ ರೂ 200 ರಂತೆ ರೂ 11726 ಕೋಟಿ ರೂಗಳನ್ನು ನೇರವಾಗಿ 1.09 ಕೋಟಿ ಯಜಮಾನಿಯರಿಗೆ ವರ್ಗಾಯಿಸಿ ವಿಶ್ವ ದಾಖಲೆ ನಿರ್ಮಿಸಿದೆ.
ಯುವಕರ ಶ್ರೇಯೋಭಿವೃದ್ಧಿಗಾಗಿ ಯುವನಿಧಿ ಯೋಜನೆಯಡಿ 2023ರಲ್ಲಿ ಉತ್ತೀರ್ಣರಾದ ಪದವೀಧರರು ಹಾಗೂ ಡಿಪ್ಲೋಮಾ ಮುಗಿಸಿದ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ.
ಜನಸ್ಪಂದನದಿಂದ ಜನರ ಬಳಿಗೆ ಸರ್ಕಾರ ಎನ್ನುವಂತೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲಾಧಿಕಾರಿಗಳಿಂದ ಜನತಾ ದರ್ಶನ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವುದರ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಲಾಗಿದೆ.
ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ 15068 ಕುಂದು-ಕೊರತೆಗಳಲ್ಲಿ 9780 ಕುಂದು-ಕೊರತೆಗಳನ್ನು ವಿಲೇ ಮಾಡಲಾಗಿದೆ. ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡುವುದರ ಮೂಲಕ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನುಗಳಿಗೆ ಅನಧಿಕೃತ ಪರಭಾರೆಯಿಂದ ರಕ್ಷಣೆ ಸೇರಿದಂತೆ ಸಕ್ಷಮ ಪ್ರಾಧಿಕಾರದ ಯಾವುದೇ ಕಾಲಮಿತಿ ಇಲ್ಲದೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕವಾಗಿಸುವ ಉದ್ದೇಶದಿಂದ ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ ಮಾಡಲಾಗಿದೆ. ಬೆಂಗಳೂರಿನ ನಿವಾಸಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ `ನಾಗರಿಕರ ಧ್ವನಿ ಈಗ ಸರ್ಕಾರದ ಧ್ವನಿ’ ಎಂಬ ಘೋಷವಾಕ್ಯದೊಂದಿಗೆ ಬ್ರಾಂಡ್ ಬೆಂಗಳೂರು ಪರಿಕಲ್ಪನೆಯ ಚಿಂತನಶೀಲ ಉಪಕ್ರಮಕ್ಕೆ ಚಾಲನೆ ನೀಡಲಾಗಿದೆ.
ಸಾಮಾಜಿಕ ನ್ಯಾಯದ ಮೂಲ ಹರಿಕಾರನಿಗೆ ಕರ್ನಾಟಕ ಸರ್ಕಾರದ ಗೌರವ ನೀಡಲಾಗಿದೆ. ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರರು `ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡುವುದರ ಮೂಲಕ ಮಹತ್ತರ ನಿಲುವನ್ನು ತೆಗೆದುಕೊಂಡಿದೆ.
ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಮಹತ್ತರ ಯೋಜನೆಗಳ ಮಾಹಿತಿಯನ್ನು ವಸ್ತು ಪ್ರದರ್ಶನದಲ್ಲಿ ಫಲಕಗಳ ಮೂಲಕ ಸಾರ್ವಜನಿಕರಿಗೆ ಮುಕ್ತವಾಗಿ ಪ್ರದರ್ಶಿಸಲಾಯಿತು.
ಹಸಿವು ಮುಕ್ತ ಕರ್ನಾಟಕವನ್ನಾಗಿಸುವ ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾದ `ಅನ್ನಭಾಗ್ಯ’ದಡಿ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಉಚಿತ 10 ಕೆ.ಜಿ ಆಹಾರಧಾನ್ಯ ಸೇರಿದಂತೆ ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ 5 ಕೆ.ಜಿ. ಅಕ್ಕಿ ಬದಲಿಗೆ ರೂ 170ರಂತೆ 4.02 ಕೋಟಿ ಫಲಾನುಭವಿಗಳಿಗೆ ರೂ 4595 ಕೋಟಿ ವರ್ಗಾಯಿಸುವುದರ ಮೂಲಕ ಬಡ ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಿ, ಬಲವರ್ಧನೆಗೆ ಸಹಾಯಕವಾಗಿದೆ.