ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಾಜ್ಯ ಘಟಕದ ವತಿಯಿಂದ `ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ’ ಎಂಬ ಧ್ಯೇಯವಾಕ್ಯದಡಿ ರಾಜ್ಯವ್ಯಾಪಿ ಅಭಿಯಾನವನ್ನು ಸೆಪ್ಟೆಂಬರ್ 13ರಿಂದ 22ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮುನ್ನಾ ಕಲ್ಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವಾದಿ ಮುಹಮ್ಮದ್(ಸ)ರ ಜೀವನ ಮತ್ತು ಸಂದೇಶವು ಸಾರ್ವಕಾಲಿಕ ಮತ್ತು ಸಾರ್ವತ್ರಿಕವಾದುದು. ಅವರ ಜೀವನ ಮತ್ತು ಸಾಧನೆಗಳು ಎಲ್ಲಾ ಧರ್ಮಗಳ ಜ್ಞಾನಿಗಳ ಮೆಚ್ಚುಗೆಯನ್ನೂ ಜಗತ್ತಿನಾದ್ಯಂತ ಜನಮನ್ನಣೆಯನ್ನೂ ಗಳಿಸಿದೆ. ಅವರ ಮೇಲೆ ಅವತೀರ್ಣಗೊಂಡ ದೈವಿಕ ಗ್ರಂಥ ಪವಿತ್ರ ಕುರ್‌ಆನ್ ಮತ್ತು ಅವರ ಬೋಧನೆಗಳಾದ ಹದೀಸ್‌ಗಳು ಅಧಿಕೃತವಾಗಿ ಸಂರಕ್ಷಿಸಲ್ಪಟ್ಟಿದ್ದು ಇಂದಿಗೂ ಅವು ಪ್ರಸ್ತುತವಾಗಿವೆ.
ಅಭಿಯಾನದ ಅಂಗವಾಗಿ ರಾಜ್ಯದ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರವಾದಿ ಮುಹಮ್ಮದರ ಬಗ್ಗೆ ಜಗತ್ತಿನ ಪ್ರಸಿದ್ಧ ದಾರ್ಶನಿಕರ ಅನಿಸಿಕೆಗಳು ಮತ್ತು ಹೆಸರಾಂತ ಬುದ್ಧಿಜೀವಿಗಳು ಬರೆದಿರುವ ಲೇಖನ ಸಂಕಲನದ ಪುಸ್ತಕಗಳನ್ನು ಹೊರತರಲಾಗುವುದು. ರಾಜ್ಯಾದ್ಯಂತ ಬೃಹತ್ ಸಮ್ಮೇಳನಗಳು, ವಿಚಾರಗೋಷ್ಠಿಗಳು, ಸಂವಾದ ಕಾರ್ಯಕ್ರಗಳು, ಸಾಮಾಜಿಕ ಸೇವಾ ಕಾರ್ಯಗಳು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರಬಂಧ ಸ್ಪರ್ಧೆ ಮತ್ತು ಕ್ವಿಝ್ ಸ್ಪರ್ಧೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.