ನೆಲಮಂಗಲ:-ಪುಟ್ಟ ಮಕ್ಕಳಿಗೆ ಬಿಸಿನೀರಿನ ಹೀಟರ್‌ನಿಂದ ಮಲತಂದೆಯೋರ್ವ ಬರೆ ಎಳೆದಿರುವ ಘಟನೆ ಬೆಂಗಳೂರಿನ ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ಜರುಗಿದೆ.
ಮಲ ತಂದೆ ತನ್ನ ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಈ ಕೃತ್ಯ ಎಸಗಿದ್ದಾನೆ. ಸದ್ಯ ಬಾಗಲಗುಂಟೆ ಠಾಣೆಯ ಪೊಲೀಸರು ಮಕ್ಕಳನ್ನು ರಕ್ಷಿಸಿದ್ದಾರೆ. ರಾಕ್ಷಸ ಅಪ್ಪನ ಕ್ರೂರತನವನ್ನು ಎಳೆಎಳೆಯಾಗಿ ಮಕ್ಕಳು ಬಿಚ್ಚಿಟ್ಟಿದ್ದಾರೆ.
ಮಲ್ಲಸಂದ್ರದ ನಿವಾಸಿಯಾಗಿರುವ ಸಂತೋಷ್‌ನಿಂದ ಕೃತ್ಯವೆಸಗಲಾಗಿದೆ. ಮಕ್ಕಳು ಹೇಳಿದ ಮಾತು ಕೇಳಲ್ಲ ಎಂದು ತನ್ನ 9 ವರ್ಷದ ಹೆಣ್ಣು ಮಗು ಮತ್ತು 6 ವರ್ಷದ ಗಂಡು ಮಗುವಿಗೆ ನೀರು ಬಿಸಿ ಮಾಡುವ ಹೀಟರ್‌ನಿಂದ ಬರೆ ಎಳೆದಿದ್ದಾರೆ. ಹೀಟರ್‌ನಿಂದ ಬರೆ ಹಾಕಿದ್ದರಿಂದ ಪುಟ್ಟ ಮಕ್ಕಳು ಗಾಯಗೊಂಡಿದ್ದಾರೆ. ಸಪ್ತಗಿರಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ.
ಮಧುಗಿರಿ ಮೂಲದ ಸಂತೋಷ್ ಬಾಡಿಗೆ ಮನೆಯಲ್ಲಿ ವಾಸವಿದ್ದು, ಖಾಸಗಿ ಕಂಪನಿಯ ಮೊಬೈಲ್ ಟವರ್ ಮೆಕ್ಯಾನಿಕ್ ಆಗಿದ್ದಾರೆ. ಯಶವಂತಪುರದ ಮೊಬೈಲ್ ಶಾಪ್‌ನಲ್ಲಿ ಪತ್ನಿ ಅಂಜಲಿ ಕೂಡ ಕೆಲಸ ಮಾಡುತ್ತಾರೆ. ದಿನ ನಿತ್ಯ ಮಕ್ಕಳನ್ನು ಶಾಲೆಗೆ ಕಳಿಸದೆ ಮನೆಯಲ್ಲಿ ತಂದೆ ಸಂತೋಷ್ ಕೂಡಿ ಹಾಕುತ್ತಿದ್ದರು.
ಮಕ್ಕಳ ಕಿರುಚಾಟ ಕೇಳಿ ಪೊಲೀಸರಿಗೆ ಸ್ಥಳೀಯರಿಂದ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಬಾಗಲಗುಂಟೆ ಠಾಣೆಯ ಪೊಲೀಸರು ಮಕ್ಕಳನ್ನು ರಕ್ಷಣೆ ಮಾಡಿದ್ದರೆ. ಬಳಿಕ ತಾಯಿಗೆ ಕರೆ ಮಾಡಿ ತಿಳಿಸಿದ್ದಾರೆ. ಸದ್ಯ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


