ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟಪೂರ್ಣ ಸ್ತಬ್ಧಚಿತ್ರಗಳ ಮೂಲಕ ದೇಶದ ಗಮನ ಸೆಳೆಯುತ್ತಿದೆ. ನಮ್ಮ ರಾಜ್ಯವು ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಲೇ ಸಾಗಿದೆ. ಈ ಬಾರಿ ಲಕ್ಕುಂಡಿಯ ಶಿಲ್ಪಕಲೆಯಿಂದ ಕೂಡಿರುವ ಐತಿಹಾಸಿಕ ದೇವಾಲಯಗಳು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಲು ಹೊರಟಿದೆ ಎಂದು ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಪತ್ರಿಕಾಗೋಷ್ಠಿಯಲ್ಲಿ ನುಡಿದರು.
ಕರ್ನಾಟಕಕ್ಕೆ ಈ ಬಾರಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರವು ಅತ್ಯಂತ ಸ್ಮರಣೀಯವಾದುದು. ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ನಮ್ಮ ರಾಜ್ಯದಲ್ಲಿ ಎಲ್ಲಾ ಧರ್ಮಗಳ ದೇವಾಲಯಗಳಿವೆ. ಈ ಪೈಕಿ ಐತಿಹಾಸಿಕ ಪಟ್ಟಣವಾದ ಗದಗದ ಲಕ್ಕುಂಡಿಯು ಒಂದಾಗಿದೆ. ಅಹಿಂಸಾವಾದಿಯ ನೆಲೆಬೀಡು. ಶಿಲ್ಪಕಲೆಯ ತೊಟ್ಟಿಲಾದ ಲಕ್ಕುಂಡಿಯಲ್ಲಿ ಶೈವ, ಜೈನ ಮತ್ತು ವೈಷ್ಣವ ದೇವಾಲಯಗಳಿವೆ. ಕಲಾತ್ಮಕತೆಯಿಂದ ಕಂಗೊಳಿಸುವ ಇಲ್ಲಿನ ದೇವಾಲಯಗಳು ಈ ಬಾರಿಯ ಸ್ತಬ್ಧಚಿತ್ರದಲ್ಲಿ ಅವುಗಳ ಪಡಿಯಚ್ಚಿನಂತೆ ಮೂಡಿಬಂದಿವೆ. ರಾಜ್ಯವು ಪ್ರಸ್ತುತ ಪಡಿಸುತ್ತಿರುವ ಈ ಸ್ತಬ್ಧಚಿತ್ರವು ಇದೇ ಜ.26ರಂದು ಎಲ್ಲರ ಮನಸೂರೆಗೊಳ್ಳಲಿದೆ ಎನ್ನುವ ವಿಶ್ವಾಸ ಹೊಂದಿರುವುದಾಗಿ ಆಯುಕ್ತರು ತಿಳಿಸಿದರು.
ದೆಹಲಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರ ಸರ್ಕಾರ ರಕ್ಷಣಾ ಇಲಾಖೆಯಲ್ಲಿ ಅದರ ಅನುಮೋದನೆ, ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಅಲ್ಲದೆ, ಇಲಾಖೆಯು ಕಳೆದ 15 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದೆ. ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದು ಅವರು ತಮ್ಮ ಸಂತಸವನ್ನು ಹಂಚಿಕೊಂಡರು.
ಗದಗದ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಶರಣು ಗೋಗೇರಿ ಅವರು ಒದಗಿಸಿದ ಛಾಯಾಚಿತ್ರಗಳು ಮತ್ತು ಮಾಹಿತಿ ಸೇರಿದಂತೆ ವಿಷಯ ಪರಿಣಿತರು, ತಜ್ಞರು, ಕಲಾನಿರ್ದೇಶಕರು ಮತ್ತು ಕಲಾವಿದರೊಂದಿಗೆ ಪರಾಮರ್ಶಿಸಿಕೊಂಡು ಇಲಾಖೆಯು ಈ ಕೆಲಸವನ್ನು ಕೈಗೆತ್ತಿಕೊಂಡಿತ್ತು. ಹಾಕಿಕೊಂಡ ಕಾರ್ಯತಂತ್ರದ ರೂಪು ರೇಷೆಗಳಂತೆ ಈ ಸ್ತಬ್ಧಚಿತ್ರ ದಿನಗಳ ಲೆಕ್ಕದಲ್ಲಿ ಮೈದಳೆದಿದೆ. ಕಡಿಮೆ ಅವಧಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸ್ತಬ್ಧಚಿತ್ರ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಮೂಡಿ ಬಂದಿದೆ ಎಂದರು.
ಅಂತಾರಾಷ್ಟ್ರೀಯ ಖ್ಯಾತಿಯ ಕಲಾನಿರ್ದೇಶಕ ಶಶಿಧರ ಅಡಪ ವಿನ್ಯಾಸ ಮಾಡಿಕೊಟ್ಟ ಮಾದರಿಗೆ ಆಯ್ಕೆ ಸಮಿತಿ ಮೊದಲ ಹಂತದಲ್ಲೇ ಅನುಮೋದನೆ ನೀಡಿತ್ತು. ಸಂಗೀತ ನಿರ್ದೇಶಕ ಪ್ರವೀಣ್ ಡಿ.ರಾವ್ ಅವರ ಕನ್ನಡ ಸಂಗೀತವನ್ನು ಹಾಗೆಯೇ ಉಳಿಸಿಕೊಂಡಿದೆ. ಮೈಸೂರು, ಬೆಂಗಳೂರು, ಗದಗ ಮತ್ತು ಧಾರವಾಡದ ಕಲಾವಿದರಿಂದ ಕೂಡಿರುವ 18 ಮಂದಿ ತಂಡವನ್ನು ಜಗ್ಗಲಿಗೆ ಕಲಾವಿದರಾದ ಲಿಂಗಯ್ಯ ಅವರು ಮುನ್ನಡೆಸುತ್ತಾರೆ ಎಂದು ವಿವರಿಸಿದರು.
ವಿಷಯ ಆಯ್ಕೆಯ ಬಳಿಕ ಲಕ್ಕುಂಡಿಯ ಶಿಲ್ಪಕಲೆಯ ವೈಭವವನ್ನು ಅದರ ಪ್ರತಿರೂಪದಂತೆ ಕೆತ್ತುವ ಬೃಹತ್ ಸವಾಲು ಎದುರಾಗಿತ್ತು. ಕರ್ನಾಟಕದ ಬಗೆಗಿನ ಅಭಿಮಾನ, ನಾಡಿನ ಹಿರಿಮೆ ಹಾಗೂ ಸಂಸ್ಕೃತಿಯ ಮಹತ್ವವನ್ನು ಎತ್ತಿ ಹಿಡಿಯುವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಪ್ರೋತ್ಸಾಹದ ನುಡಿಗಳೇ ಈ ಸವಾಲಿನ ಕೆಲಸಕ್ಕೆ ಮುನ್ನುಡಿ ಬರೆದಿತ್ತು. ಪ್ರವಾಸೋದ್ಯಮ ಮತ್ತು ಗದುಗಿನ ಉಸ್ತುವಾರಿ ಸಚಿವರಾದ ಹೆಚ್.ಕೆ. ಪಾಟೀಲ್ ಅವರ ಮಾರ್ಗದರ್ಶನ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಬಿ. ಕಾವೇರಿ ಅವರ ಸಲಹೆ-ಸೂಚನೆಗಳು ಸ್ತಬ್ಧಚಿತ್ರದ ಕೆಲಸವನ್ನು ಸುಗಮವಾಗಿಸಿತ್ತು ಎಂದು ವಾರ್ತಾ ಇಲಾಖೆಯು ಆಯುಕ್ತರು ಹೇಳಿದರು.
ಸ್ತಬ್ಧಚಿತ್ರದ ಮುಂಭಾಗವು ಬ್ರಹ್ಮ ಜಿನಾಲಯ ದೇವಸ್ಥಾನದ ಬ್ರಹ್ಮನ ಪ್ರತಿಮೆಯನ್ನು ಹೊಂದಿದೆ. ಇದು ಲಕ್ಕುಂಡಿಯಲ್ಲಿರುವ ಅತ್ಯಂತ ಹಳೆಯ ಜೈನ ದೇವಾಲಯವಾಗಿದ್ದು, ಭಗವಾನ್ ಮಹಾವೀರನಿಗೆ ಸಮರ್ಪಿತವಾಗಿದೆ. ಅದರ ನಂತರ ಬ್ರಹ್ಮ ಜಿನಾಲಯ ದೇವಸ್ಥಾನದ ತೆರೆದ ಕಂಬದ ಮಂಟಪವಿದೆ. ಸ್ತಬ್ಧಚಿತ್ರದ ಮುಖ್ಯ ವಿಭಾಗವು ಭವ್ಯವಾದ ಮತ್ತು ಅಲಂಕೃತವಾದ ಕಾಶಿ ವಿಶ್ವೇಶ್ವರ ದೇವಸ್ಥಾನ ಮತ್ತು ಶಿವನಿಗೆ ಸಮರ್ಪಿತವಾದ ನನ್ನೇಶ್ವರ ದೇವಸ್ಥಾನವನ್ನು ಪ್ರದರ್ಶಿಸುತ್ತದೆ.