ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿವಿಧ ಕಾರಣಗಳಿಂದ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ 5 ಜೋಡಿಗಳನ್ನು ಪುನಃ ಒಂದುಗೂಡಿಸಿ ಕಳುಹಿಸಲಾಯಿತು. ಪರಸ್ಪರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳಿಗೆ ತಿಳಿ ಹೇಳಿ, ಹಿಂದಿನದೆಲ್ಲಾ ಮರೆತು ಮುಂದೆ ಹೋಗಬೇಕು, ಹೊಂದಾಣಿಕೆಯಿಂದ ಜೀವನ ಸಾಗಿಸಬೇಕು, ಅರ್ಥ ಮಾಡಿಕೊಂಡು ಜೀವನ ಸಾಗಿಸಿದರೆ ಬದುಕು ಚೆನ್ನಾಗಿರುತ್ತದೆ ಎಂದು ಸಂಧಾನ ಜರುಗಿಸಿ ಅವರ ಮನ ಒಲಿಸಿ ಪುನಃ ಒಂದುಗೂಡಿಸಿದ ಕಥೆ ನಿಜಕ್ಕೂ ಮೆಚ್ಚುವಂಥಹದು ಎಂದು ಗದುಗಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ನುಡಿದರು.
ಒಂದು ಜೋಡಿ ದಂಪತಿಗಳು ಪರಸ್ಪರ ವಿಚ್ಛೇದನಕ್ಕೆ 2023ರಲ್ಲಿ ಸೆಕ್ಷನ್ 13(ಬಿ) ಅಡಿಯಲ್ಲಿ ತಮಗೆ ವಿಚ್ಛೇದನ ನೀಡಬೇಕು ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅವರಿಗೆ ಎರಡು ಮಕ್ಕಳು ಸಹ ಇದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ಹಾಗೂ ವಕೀಲರು ಈ ರೀತಿ ವಿಚ್ಛೇದನಕ್ಕೆ ಅರ್ಜಿ ಹಾಕಿ ವಿಚ್ಛೇದನ ಪಡೆದರೆ ಮಕ್ಕಳ ಭವಿಷ್ಯ ಏನಾಗುತ್ತದೆ ಎಂಬುದನ್ನು ವಿಚಾರ ಮಾಡಿ.
ನಿಮಗಲ್ಲದಿದ್ದರೂ ನಿಮ್ಮ ಮಕ್ಕಳ ಉತ್ತಮ ಜೀವನಕ್ಕೆ ತಾವು ಕೂಡಿ ಬಾಳಿದರೆ ಚೆನ್ನಾಗಿರುತ್ತದೆ ಎಂದು ಬುದ್ಧಿವಾದ ಹೇಳಿ ಸಂಧಾನ ನಡೆಸಿ ಇಬ್ಬರ ಮನವೊಲಿಸಿ ಅವರನ್ನು ಕೂಡಿ ಹೋಗುವಂತೆ ಸಂಧಾನಗೊಳಿಸುವಲ್ಲಿ 1ನೇ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು, ಸಂಧಾನಕಾರ ವಕೀಲರು ಹಾಗೂ ಪ್ರಕರಣದ ವಕೀಲರಾದ ಎ.ಡಿ. ಬಡಿಗೇರ ಹಾಗೂ ಮೇರವಾಡೆ ವಕೀಲರು ಸಫಲರಾದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ ಎಸ್ ಶೆಟ್ಟಿ, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಕಾಶೀಮ ಚೂರಿಖಾನ, 1ನೇ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಖಾದರಸಾಬ ಹೆಚ್.ಬೆನಕಟ್ಟಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ಜಿ.ಆರ್. ಶೆಟ್ಟರ ಹಾಗೂ ಕಿರಿಯ ವಿಭಾಗದ ನ್ಯಾಯಾಧೀಶರಾದ ಎಸ್.ಎಸ್. ತಳವಾರ, ದೀಪ್ತಿ ನಾಡಗೌಡ, ಬೀರಪ್ಪ ಕಾಂಬಳೆ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಂ.ಐ. ಹಿರೇಮನಿ ಪಾಟೀಲ, ಕಾರ್ಯದರ್ಶಿ ಬಿ.ಎಚ್. ಮಾಡಲಗೇರಿ ಸೇರಿದಂತೆ ಪ್ರಕರಣದ ವಕೀಲರು, ಸಂಧಾನಕಾರ ವಕೀಲರು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಸರ್ವರನ್ನು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ಅಂತೆಯೇ ಇನ್ನುಳಿದ ನಾಲ್ಕು ಜೋಡಿಗಳು ಸಹ ಜೀವನಾಂಶ ಕೋರಿ, ವಿಚ್ಛೇದನ ಕೋರಿ ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆ ದಂಪತಿಗಳನ್ನು ಸಹ ಮನವೊಲಿಸಿ, 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು, ಪಕ್ಷಗಾರರ ಪರ ವಕೀಲರು, ಸಂಧಾನಕಾರ ವಕೀಲರು ಸೇರಿ ಬುದ್ಧಿವಾದ ಹೇಳಿ ವಿಚ್ಛೇದನಕ್ಕೆ ತಯಾರಾಗಿದ್ದ ದಂಪತಿಗಳನ್ನು ಪುನಃ ಒಂದುಗೂಡಿಸಿ ಕಳುಹಿಸಿದ್ದು ವಿಶೇಷವಾಗಿತ್ತು. ಅದೇರೀತಿ ಮುಂಡರಗಿ ನ್ಯಾಯಾಲಯದಲ್ಲಿ ಒಂದು ಜೋಡಿ ಹಾಗೂ ಲಕ್ಷ್ಮೇಶ್ವರ ನ್ಯಾಯಾಲಯದಲ್ಲಿ ಒಂದು ಜೋಡಿ ದಂಪತಿಗಳನ್ನು ಸಹ ಆಯಾ ನ್ಯಾಯಾಲಯದಲ್ಲಿ ರಾಜೀ ಸಂಧಾನದಲ್ಲಿ ಒಂದುಗೂಡಿ ಕಳುಹಿಸಲಾಯಿತು.