ಬೆಂಗಳೂರು:- ಖದೀಮರ ಗುಂಪೊಂದು ಚಿನ್ನ, ಬೆಳ್ಳಿ ಬಿಟ್ಟು ತಲೆಕೂದಲು ಕಳ್ಳತನ ಮಾಡಿರುವ ವಿಚಿತ್ರ ಪ್ರಕರಣ ಬೆಂಗಳೂರಿನ ಸೋಲದೇವನಹಳ್ಳಿಯ ಲಕ್ಷ್ಮೀಪುರ ಕ್ರಾಸ್‌ನಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ಬಂಧಿತನನ್ನು ಯಲ್ಲಪ್ಪ ಎಂದು ಗುರುತಿಸಲಾಗಿದೆ.
ಮಾ.1 ರಂದು ಲಕ್ಷ್ಮೀಪುರ ಕ್ರಾಸ್‌ನ ಗೋದಾಮಿನಿಂದ ಆರೋಪಿ ಯಲ್ಲಪ್ಪ ಸೇರಿದಂತೆ ಐದು ಜನರ ತಂಡ ಗೋದಾಮಿನ ಬೀಗ ಮುರಿದು ಕೂದಲನ್ನು ಕದ್ದಿದ್ದರು. ಗೂಡ್ಸ್ ವಾಹನದ ಮೂಲಕ ಸುಮಾರು 25 ಲಕ್ಷ ರೂ. ಬೆಲೆಬಾಳುವ 400 ಕೆ.ಜಿ ಕೂದಲನ್ನು ಕದ್ದು ಪರಾರಿಯಾಗಿದ್ದರು.
ಈ ಕುರಿತು ಗೋದಾಮಿನ ಮಾಲೀಕ ವೆಂಕಟರಮಣ ಕಳ್ಳತನ ಕುರಿತು ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದು, ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಆರೋಪಿಗಳು ಕದ್ದ ಕೂದಲನ್ನು ಚನ್ನರಾಯಪಟ್ಟಣ ಹಾಗೂ ಆಂಧ್ರಗೆ ಸಾಗಿಸಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ಕೂದಲನ್ನು ಚೀನಾ, ಬರ್ಮಾ ಮತ್ತು ಹಾಂಕಾಂಗ್‌ಗೆ ರಫ್ತು ಮಾಡಬೇಕಾಗಿತ್ತು ಎನ್ನೋದು ಗೊತ್ತಾಗಿದೆ.
ಐದು ಜನರ ಪೈಕಿ ಯಲ್ಲಪ್ಪ ಪೊಲೀಸರ ಬಲೆಗೆ ಬಿದ್ದಿದ್ದು, ಉಳಿದವರಿಗೆ ಪೊಲೀಸರು ತಲಾಶ್ ನಡೆಸಿದ್ದಾರೆ.