HomeArt and Literature`ವ್ಯಸನ ಮುಕ್ತ'ಕ್ಕಾಗಿ ದೃಢ ಸಂಕಲ್ಪ

`ವ್ಯಸನ ಮುಕ್ತ’ಕ್ಕಾಗಿ ದೃಢ ಸಂಕಲ್ಪ

For Dai;y Updates Join Our whatsapp Group

Spread the love

ಸಮಾಜದಲ್ಲಿ ಯಾವೊಬ್ಬ ವ್ಯಕ್ತಿಯೂ ವ್ಯಸನಗಳಿಗೆ ದಾಸರಾಗಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಪಡೆದುಕೊಂಡು ನೆಮ್ಮದಿಯ ಜೀವನ ನಡೆಸಬೇಕೆನ್ನುವ ಆರೋಗ್ಯಕರ ಸಮಾಜದ ಪರಿಕಲ್ಪನೆ ಇಟ್ಟುಕೊಂಡು ವ್ಯಸನ ಮುಕ್ತ ಸಮಾಜಕ್ಕಾಗಿ `ದೇಶಾದ್ಯಂತ ಜೋಳಿಗೆ ಕಾರ್ಯಕ್ರಮ’ ಮೂಲಕ ಸಂಚರಿಸಿ, ವ್ಯಸನ ಹಾಗೂ ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸಿದವರು ಲಿಂ. ಡಾ. ಮಹಾಂತ ಶಿವಯೋಗಿ ಅಜ್ಜನವರು.

ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ 1 ಆಗಸ್ಟ್ 1930ರಲ್ಲಿ ಜನಿಸಿದ ಡಾ. ಮಹಾಂತ ಶಿವಯೋಗಿಗಳು ತಮ್ಮ 10 ನೇ ವಯಸ್ಸಿನಲ್ಲೇ ಸನ್ಯಾಸಿ ಜೀವನವನ್ನು ಸ್ವೀಕರಿಸಿ, ಸವದಿಯ ವಿರಕ್ತ ಮಠದ ಚಿಕ್ಕ ಸ್ವಾಮಿಗಳಾದರು. ಇವರು ಕಾಶಿಯಲ್ಲಿ ಸಂಸ್ಕೃತ, ಹಿಂದಿ, ಯೋಗ, ಶಾಸ್ತ್ರೀಯ ಸಂಗೀತ, ಆಧ್ಯಾತ್ಮಿಕ ಪ್ರವಚನ ಹೀಗೆ ನಾನಾ ವಿಷಯಗಳಲ್ಲಿ ಪರಿಣಿತಿಯನ್ನು ಪಡೆದಿದ್ದರು.

1970ರಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ 19ನೇ ಪೀಠಾಧಿಕಾರಿಗಳಾದ ಡಾ. ಮಹಾಂತ ಶಿವಯೋಗಿ ಅಜ್ಜನವರು ಬಳಿಕ ಉತ್ತರ ಕರ್ನಾಟಕದಿಂದ `ವ್ಯಸನ ಮುಕ್ತ’ಕ್ಕಾಗಿ ದೃಢ ಸಂಕಲ್ಪ ತೊಟ್ಟು, 1975ಕ್ಕೆ ಆರಂಭಿಸಿದ ‘ಮಹಾಂತ ಜೋಳಿಗೆ ಕಾರ್ಯಕ್ರಮ’ದಡಿ ದೇಶಾದ್ಯಂತ ಅಷ್ಟೇ ಅಲ್ಲದೇ ಇಂಗ್ಲೆಂಡ್‌ ಸೇರಿದಂತೆ ವಿದೇಶದಲ್ಲೂ ಸಂಚರಿಸಿ, 42 ವರ್ಷಗಳ ಕಾಲ ಮಾದಕ ಸೇವನೆ ಹಾಗೂ ದುಶ್ಚಟಗಳಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಿ, ತಮ್ಮ ಜೋಳಿಗೆ ಹಿಡಿದು ಜನರಲ್ಲಿನ ದುಶ್ಚಟಗಳ ಭಿಕ್ಷೆ ಬೇಡಿದರು.

ನಿರಂತರ ಅನ್ನ ದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ, ದೇವದಾಸಿಯರ ಮಕ್ಕಳಿಗೆ ಟ್ರಸ್ಟ್ ಸ್ಥಾಪನೆ, ನಿರುದ್ಯೋಗಿಗಳಿಗೆ ಮತ್ತು ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ ಸ್ಥಾಪನೆ, ನಿಸರ್ಗ ಚಿಕಿತ್ಸೆ, ಯೋಗ ಕೇಂದ್ರ ಸ್ಥಾಪನೆ, ಶಾಖಾ ಮಠಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಯುವಕರಿಗೆ ಧರ್ಮ ಸಂಸ್ಕಾರ ನೀಡಿ ಪಟ್ಟಾಭಿಷೇಕ, ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಕಾರಿಯನ್ನಾಗಿ ಮಾಡಿದ್ದು, ಮಠದ ನೂರಾರು ಎಕರೆ ಜಮೀನು ಆಯಾ ಗ್ರಾಮಗಳ ರೈತರಿಗೆ ಕೃಷಿ ಮಾಡಿ ಬದುಕಲು ಅನುಕೂಲ ನೀಡಿದರು.

ವಿಪರೀತ ಮದ್ಯಪಾನ ಸೇವನೆಯಿಂದ ಯುವಕನೊಬ್ಬ ಸಾವನ್ನಪ್ಪಿದ ಸುದ್ದಿ ತಿಳಿದು ಕುಟುಂಬಕ್ಕೆ ಸಾಂತ್ವಾನ ಹೇಳಲು ಅವನ ಕೇರಿಗೆ ತೆರಳಿದ್ದ ಶ್ರೀಗಳು, ಅಲ್ಲಿ ಮೃತ ಯುವಕನ ಧರ್ಮಪತ್ನಿ ಹಾಗೂ ಮಕ್ಕಳು ಉಪವಾಸದಿಂದ ಕಣ್ಣೀರು ಹಾಕುತ್ತಿರುವುದು ಕಂಡರು. ಇದೇ ರೀತಿ ಸಾವಿರಾರು ಕುಟುಂಬಗಳಲ್ಲಿ ಗಂಡಂದಿರು ಮದ್ಯಪಾನ ಸೇವನೆ ಹಾಗೂ ಮಾದಕ ವಸ್ತುಗಳ ವ್ಯಸನಕ್ಕೆ ದಾಸರಾಗಿ ಸಾವಿಗೀಡಾಗುತ್ತಿದ್ದಾರೆ. ಇದರಿಂದ ಹೆಂಡತಿ, ಮಕ್ಕಳು ಸೇರಿ ಕುಟುಂಬಸ್ಥರು ಬೀದಿ ಪಾಲಾಗುತ್ತಿದ್ದಾರೆ. ಇಂತಹ ದುಶ್ಚಟಗಳಿಗೆ ಜೀವನ ಹಾಳಾಗಿಸಿಕೊಳ್ಳುತ್ತಿರುವದನ್ನು ನಿರ್ಮೂಲನೆ ಮಾಡಲು `ಮಹಾಂತ ಜೋಳಿಗೆ’ ಆರಂಭಿಸಿದರು.

1967ರಲ್ಲಿ ಹಾವೇರಿಯ ಹುಕ್ಕೇರಿ ಮಠದಿಂದ `ಅಭಿನವ ಚನ್ನಬಸವಣ್ಣ’, 1968ರಲ್ಲಿ ದಾವಣಗೆರೆಯ ಗಾನಯೋಗಿ ಪುಟ್ಟರಾಜ ಗವಾಯಿಗಳ ಪುರಾಣ ಸಮಿತಿಯಿಂದ `ಕಾಯಕನಿಷ್ಠ ಶಿವಯೋಗಿ’, 1969ರಲ್ಲಿ ಬಾಗಲಕೋಟೆಯ ನಾಗರಿಕರಿಂದ `ಪ್ರವಚನ ಪ್ರವೀಣ’, 1990ರಲ್ಲಿ ಚಿತ್ತರಗಿ-ಇಳಕಲ್ಲ ಸದ್ಭಕ್ತರಿಂದ `ಶಿವಾನುಭವ ಚರವರ್ಯ’, 1971ರಲ್ಲಿ ರಾವೂರ(ಚಿತ್ತಾಪುರ) ಭಕ್ತರಿಂದ `ವೀರಶೈವ ತತ್ವವೆತ್ತ ಸಮಾಜ ಸಂಘಟಕ ಪ್ರಶಸ್ತಿ’ಗಳು ಸಂದಿವೆ. 2006ರಲ್ಲಿ ಗದಗ-ಬೆಟಗೇರಿಯ ಅಂಬಿಗೇರ ಪ್ರತಿಷ್ಠಾನದಿಂದ `ಗಣಾಚಾರ ಪ್ರಶಸ್ತಿ’, ಅಥಣಿಯ ಕನಕದಾಸ ಸಾಹಿತ್ಯ-ಸಂಸ್ಕೃತಿ ವೇದಿಕೆಯಿಂದ `ಕನಕಶ್ರೀ ಪ್ರಶಸ್ತಿ’, 2007ರಲ್ಲಿ ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘದಿಂದ `ನಾಡಿನ ಪುಣ್ಯದ ಶಿವಯೋಗಿ ಪ್ರಶಸ್ತಿ’, 2018ರಲ್ಲಿ ಟಿವಿ9 ವಾಹಿನಿಯಿಂದ `ಯೋಗರತ್ನ ಪ್ರಶಸ್ತಿ’ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಮಠಮಾನ್ಯಗಳಿಂದ ಹಲವಾರು ಪ್ರಶಸ್ತಿಗಳಿಗೆ ಮಹಾಂತ ಶ್ರೀಗಳು ಭಾಜರಾಗಿದ್ದರು.

ವ್ಯಸನ ಮಕ್ತ ವ್ಯಕ್ತಿ, ಗ್ರಾಮ ಸೇರಿದಂತೆ ಇಡೀ ಮಾನವ ಸಮಾಜವೇ ದುಷ್ಚಟಗಳಿಂದ ಮುಕ್ತರಾಗಬೇಕು. ಎಲ್ಲ ಜನರು ಉತ್ತಮ ಆರೋಗ್ಯ ಪಡೆಯಬೇಕು ಎನ್ನುವ ಬಹು ಸಮಾಜಮುಖಿ ಉದ್ದೇಶದಿಂದ ಶ್ರಮಿಸಿದ ಡಾ. ಮಹಾಂತ ಶಿವಯೋಗಿ ಅಜ್ಜನವರು 2018ರಲ್ಲಿ ಶ್ರೀಗಳು ಅಪಾರ ಸಂಖ್ಯೆಯ ಭಕ್ತಗಣವನ್ನು ಬಿಟ್ಟು ಇಹಲೋಕವನ್ನು ತ್ಯಜಿಸಿ ಶಿವೈಕ್ಯರಾದರು.

ಲಿಂಗೈಕ್ಯ ಡಾ. ಮಹಾಂತ ಶಿವಯೋಗಿ ಅಜ್ಜನವರು ದೇಶ-ವಿದೇಶಗಳಲ್ಲಿ ಸಂಚರಿಸಿ, ಜನರಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣದ ಜನಜಾಗೃತಿ ಮೂಡಿಸಲು ಶ್ರಮಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪ್ರತಿ ವರ್ಷವೂ ಶ್ರೀಗಳ ಜನ್ಮದಿನವಾದ ಆಗಸ್ಟ್ 1ನ್ನು `ವ್ಯಸನ ಮುಕ್ತ ದಿನಾಚರಣೆ’ಯನ್ನಾಗಿ ರಾಜ್ಯಾದ್ಯಂತ ಆಚರಿಸುವ ಮೂಲಕ ಶ್ರೀಗಳ ಸಮಾಜ ಸೇವೆ ಸ್ಮರಿಸಿಕೊಳ್ಳುತ್ತಾ, ಸಮಾಜದ ಯುವ ಜನತೆ ಮಾದಕ ವಸ್ತುಗಳ ಸೇವನೆ ಹಾಗೂ ದುಶ್ಚಟಗಳಿಗೆ ಅಂಟಿಕೊಳ್ಳದೇ ದೂರವಿದ್ದು, ಸಾರ್ವಜನಿಕರು ಆರೋಗ್ಯಯುತ ಬದುಕು ಕಟ್ಟಿಕೊಳ್ಳುವಂತೆ ಜಾಗೃತಿಯ ಸಂದೇಶ ಸಾರುತ್ತಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!