ವಿದ್ಯಾರ್ಥಿಯ ಜೀವನ ತಪಸ್ಸು ಇದ್ದಂತೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳ ಶ್ರಮ, ಸಂಯಮ ಮತ್ತು ನಿಶ್ಚಲ ದಿಟ್ಟತೆಯೇ ಸಾಧನೆಯ ಯಶಸ್ಸು. ಅದುವೇ ತಂದೆ-ತಾಯಿ, ಶಿಕ್ಷಕರಿಗೆ ಸಂತೋಷ. ವಿದ್ಯಾರ್ಥಿ ಜೀವನ ತಪಸ್ಸು ಇದ್ದಂತೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

Advertisement

ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2747ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ವಿದ್ಯಾರ್ಥಿ ಜೀವನ ತಪಸ್ಸು ಇದ್ದಂತೆ. ಪ್ರತಿನಿತ್ಯದ ಬೆಳಗಿನ ಓದು, ರಾತ್ರಿಯ ತಯಾರಿ ನಿಮ್ಮ ಸಾಧನೆಯನ್ನು ಉತ್ತುಂಗಕ್ಕೇರಿಸುತ್ತದೆ. ಈ ಯಶಸ್ಸು ಶಿಕ್ಷಣ ಮಾರ್ಗದ ಒಂದು ಹೆಜ್ಜೆ ಅಷ್ಟೇ. ಮುಂದೆ ಹೋದಂತೆ ಹೆಚ್ಚಿನ ಅವಕಾಶಗಳು ಮತ್ತು ಗುರಿಗಳಿವೆ. ಈ ಸಾಧನೆಗಳು ಉಜ್ವಲವಾದ ಭವಿಷ್ಯಕ್ಕೆ ದಾರಿಯಾಗಿದೆ. ನಿಮ್ಮ ಭವಿಷ್ಯ ಬೆಳಕಿನಿಂದ ತುಂಬಿರಲಿ. ನೀವು ಉಜ್ವಲ ನಕ್ಷತ್ರಗಳಾಗಿರಿ ಎಂದು ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳಿಗೆ ಶ್ರೀಗಳು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಜಿಲ್ಲೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡುತ್ತಾ, ಪರೀಕ್ಷೆಯಲ್ಲಿ ಪರಿಶ್ರಮ ಪಟ್ಟು ಓದಿ ಉತ್ತಮ ಅಂಕ ಪಡೆದಿದ್ದೀರಿ. ನಿಮ್ಮ ಫಲಿತಾಂಶ ನೈಜ ಫಲಿತಾಂಶ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ಇದ್ದಾಗಲೂ ಪರಿಶ್ರಮಪಟ್ಟು ಓದಿ ಜಿಲ್ಲೆಯ ಕೀರ್ತಿಯನ್ನು ತಂದಿದ್ದೀರಿ. ಇದೇ ರೀತಿ ನಿಮ್ಮ ಸಾಧನೆ ಸಾಗಲಿ ಎಂದು ಶುಭ ಹಾರೈಸಿದರು.

ಗದುಗಿನ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಿಕ ಹಾಗೂ ಶಿರಹಟ್ಟಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಗಿರಿತಮ್ಮಣ್ಣವರ ಉಪಸ್ಥಿತರಿದ್ದರು. ವಚನ ಸಂಗೀತ ಸೇವೆಯನ್ನು ಗುರುನಾಥ್ ಸುತಾರ, ಅನಿರುದ್ಧ ಧನೇಶ್ ದೇಸಾಯಿ ಮತ್ತು ಶಿವಾನಂದ ಭಾವಿಕಟ್ಟಿ ನಡೆಸಿಕೊಟ್ಟರು.

ತೋಂಟದಾರ್ಯ ಕೈಗಾರಿಕಾ ತರಬೇತಿ ಕೇಂದ್ರ ಮಂಡಲಗಿರಿಯ ಕಿರಿಯ ತರಬೇತಿ ಅಧಿಕಾರಿ ಭೋಜರಾಜ ಸೊಪ್ಪಿಮಠ ರಚಿಸಿದ `ಎಲ್ಲಾ ನನ್ನವಳದೇ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ 21 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಧಾರ್ಮಿಕ ಗ್ರಂಥ ಪಠಣವನ್ನು ವಿಶ್ವಾಸ ಎಂ.ಮಳಗಾವಿಮಠ ಹಾಗೂ ವಚನ ಚಿಂತನವನ್ನು ಸ್ಪೂರ್ತಿ ಎಂ.ಮಳಗಾವಿಮಠ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಲಿಂಗನಗೌಡ ಶಂಕರಗೌಡ ಬೆಳವಟಿಗಿ ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹ ಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ, ಸಹ ಚೇರಮನ್ ಶಿವಾನಂದ ಹೊಂಬಳ ಸೇರಿದಂತೆ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಡಾ. ಉಮೇಶ ಪುರದ ಸ್ವಾಗತಿಸಿದರೆ, ಅಶೋಕ ಹಾದಿ ಕಾರ್ಯಕ್ರಮ ನಿರೂಪಿಸಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಗದುಗಿನ ಶಾಲಾ ಶಿಕ್ಷಣ ಇಲಾಖೆಯ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಎಚ್.ಬಿ. ರಡ್ಡೇರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಓದುವ ಬಗ್ಗೆ ಸಮರ್ಪಣಾ ಭಾವ ಮತ್ತು ಶಿಸ್ತು ರೂಢಿಸಿಕೊಂಡರೆ ಉತ್ತಮ ಅಂಕ ಪಡೆಯಲು ಸಾಧ್ಯ. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧಿಸಿದ ಉನ್ನತ ಫಲಿತಾಂಶ ಶಿಕ್ಷಣ ಇಲಾಖೆಗೆ ಸಾಧನೆಯ ಮುಕುಟವಾಗಿದೆ. ನಿಮ್ಮ ಮುಂಬರುವ ಶಿಕ್ಷಣದ ಆಯ್ಕೆ ನಿಮ್ಮ ಆಸಕ್ತಿಯ ಆಯ್ಕೆ ಆಗಿರಲಿ ಎಂದರು.


Spread the love

LEAVE A REPLY

Please enter your comment!
Please enter your name here