ಗದಗ: ಗಣರಾಜ್ಯೋತ್ಸವ ದಿನದಂದು ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಿಂದ ಎಡವಟ್ಟಾಗಿದೆ.
ಗದಗ ಜಿಲ್ಲಾ ಬಿಜೆಪಿ ಕಚೇರಿ ಮುಂದೆ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ ಅವರು ಶೂ ಧರಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ದಾರೆ ಎನ್ನಲಾಗಿದೆ.
ರಾಜು ಕುರಡಗಿ ಅವರು ಶೂ ಧರಿಸಿ ಧ್ವಜಾರೋಹಣ ಮಾಡಿರುವ ಫೋಟೋವೊಂದು ಎಲ್ಲೆಡೆ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಅಷ್ಟೇ ಅಲ್ಲ ಧ್ವಜಾರೋಹಣ ಸ್ಥಂಭದ ಬಳಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಅವರ ಭಾವಚಿತ್ರ ಕೂಡ ಇವೆ. ಮಹಾತ್ಮರಿಗೆ ಗೌರವ ಕೊಡದ ರಾಜು ಕುರಡಗಿ ಅವರ ನಡೆಗೆ ಸ್ವತಃ ಬಿಜೆಪಿ ನಾಯಕರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಅವರು ಕೂಡ ಅಧ್ಯಕ್ಷ ರಾಜು ಕುರಡಗಿ ಅವರ ಶೂ ಧರಿಸಿದ್ದನ್ನು ನೋಡುತ್ತಿರುವದನ್ನು ಫೋಟೋದಲ್ಲಿ ಕಾಣಬಹುದು.
ಮೊನ್ನೆ ಅಷ್ಟೇ ಜಿಲ್ಲಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ರಾಜು ಕುರಡಗಿ ಅವರ ಈ ಎಡವಟ್ಟು ಪಕ್ಷದ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ.
ಅದು ಶೂ ಅಲ್ಲ…ಬ್ಲಾಕ್ ಸಾಕ್ಸ್
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಅವರು ಶೂ ಧರಿಸಿ ಧ್ವಜಾರೋಹಣ ಮಾಡಿಲ್ಲ. ಅದು ಬ್ಲಾಕ್ ಸಾಕ್ಸ್ ಎಂದು ಜಿಲ್ಲಾ ಬಿಜೆಪಿ ಮುಖಂಡ ರಮೇಶ್ ಸಜ್ಜಗಾರ ಸ್ಪಷ್ಟನೆ ನೀಡಿದ್ದಾರೆ.