ಯಶಸ್ವಿಯಾದ ರಾಷ್ಟ್ರೀಯ ಲೋಕ ಅದಾಲತ್

0
lok adalat
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ರಾಷ್ಟ್ರೀಯ ಲೋಕ್ ಅದಾಲತ್‌ನ್ನು ಧಾರವಾಡ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿತ್ತು. ಲೋಕ್ ಅದಾಲತ್‌ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರಾದ ಕೆ.ಜಿ. ಶಾಂತಿ ಅವರ ಮಾರ್ಗದರ್ಶನದಲ್ಲಿ ಧಾರವಾಡದಲ್ಲಿ-13 ಪೀಠಗಳನ್ನು, ಹುಬ್ಬಳ್ಳಿಯಲ್ಲಿ-18 ಪೀಠಗಳನ್ನು, ಕುಂದಗೋಳ-2, ನವಲಗುಂದ-2 ಮತ್ತು ಕಲಘಟಗಿಯಲ್ಲಿ-2 ಹೀಗೆ ಒಟ್ಟು 37 ಪೀಠಗಳನ್ನು ಸ್ಥಾಪಿಸಲಾಗಿತ್ತು.

Advertisement

ಧಾರವಾಡದ ಕೌಟುಂಬಿಕ ನ್ಯಾಯಾಲಯದ ಪೀಠಾಧೀಶರಾದ ಸುವರ್ಣ ಮಿರ್ಜಿ ಮತ್ತು ಸಂಧಾನಕಾರರಾದ ಪುಷ್ಪಾ ಪಾಟೀಲ ಅವರನ್ನೊಳಗೊಂಡ ಲೋಕ್ ಅದಾಲತ್ ಪೀಠದ ಬೈಠಕ್‌ನಲ್ಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರಾದ ಕೆ.ಜಿ. ಶಾಂತಿ ಅವರು ಭಾಗವಹಿಸಿ 2 ಜೋಡಿ ಸತಿ-ಪತಿಗಳನ್ನು ಒಂದಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಪೀಠಾಧೀಶರಾದ ಇಂದಿರಾ ಚೆಟ್ಟಿಯಾರ್ ಮತ್ತು ಸಂಧಾನಕಾರರಾದ ಸವಿತಾ ಪಾಟೀಲ ಇವರನ್ನೊಳಗೊಂಡ ಲೋಕ್ ಅದಾಲತ್ ಪೀಠದ ಬೈಠಕ್‌ನಲ್ಲಿ 8 ಜೋಡಿ ಸತಿ-ಪತಿಗಳನ್ನು ಒಂದಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಧಿಕ ಕೌಟುಂಬಿಕ ನ್ಯಾಯಾಲಯದ ಪೀಠಾಧೀಶ ರವಿ ಅರಿ ಮತ್ತು ಪರಶುರಾಮಗೌಡರ್ ಇವರನ್ನೊಳಗೊಂಡ ಲೋಕ್ ಅದಾಲತ್ ಪೀಠದ ಬೈಠಕ್‌ನಲ್ಲಿ 6 ಜೋಡಿ ಸತಿ-ಪತಿಗಳನ್ನು ಒಂದಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಂದಗೋಳದ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಜೆ. ಪರಮೇಶ್ವರ ಮತ್ತು ನ್ಯಾಯವಾದಿ ಸಂಧಾನಕಾರ ವಿನಾಯಕ ಹಡಪದ ಒಂದು ಕೌಟುಂಬಿಕ ವ್ಯಾಜ್ಯಗಳನ್ನು ಬಗೆಹರಿಸಿದ್ದು, ಧಾರವಾಡ ಜಿಲ್ಲೆಯ ಒಟ್ಟು 17 ಜೋಡಿ ದಂಪತಿಗಳನ್ನು ಒಂದಾಗಿಸುವಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಯಶಸ್ವಿಯಾಗಿದೆ.

ಧಾರವಾಡದ ಪ್ರಧಾನ ಹಿರಿಯ ಸಿವಿಲ್ ಮತ್ತು ಸಿ.ಜೆ.ಎಮ್. ನ್ಯಾಯಾಧೀಶ ಸಂಜಯ ಪಿ. ಗುಡಗುಡಿ ಮತ್ತು ಸಂಧಾನಕಾರ ಪ್ರಕಾಶ ರಟಗೇರಿ ಇವರನ್ನೊಳಗೊಂಡ ಲೋಕ್ ಅದಾಲತ್ ಪೀಠದ ಬೈಠಕನಲಿ ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ ವಿಮಾ ಕಂಪನಿ ಮೃತನ ವಾರಸುದಾರರಾದ ಅರ್ಜಿದಾರರಿಗೆ 2 ಕೋಟಿ ರೂಪಾಯಿಗಳ ಪರಿಹಾರವನ್ನು ನೀಡಲು ಒಪ್ಪಿ ರಾಜಿ ಮಾಡಲಾಗಿದೆ.

ಹುಬ್ಬಳ್ಳಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್. ಚಿನ್ನಣ್ಣವರ ಅವರ ನ್ಯಾಯಾಲಯದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಆರ್.ಬಿ. ಪಾಟೀಲ ಅವರು ತಮ್ಮ ಕುಟುಂಬದವರೊಂದಿಗೆ ರಾಜಿ ಮಾಡಿಕೊಂಡಿದ್ದು, ಅದರಲ್ಲಿ 82 ವರ್ಷದ ಅವರ ತಾಯಿ ಸಹ ಪಾಲ್ಗೊಂಡಿದ್ದರು. ಪ್ರಕರಣದಲ್ಲಿ ಎಲ್ಲರೂ ಸಂತೋಷದಿಂದ ತಮ್ಮ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಂಡರು.

ಹುಬ್ಬಳ್ಳಿಯ ಔದ್ಯಮಿಕ ನ್ಯಾಯಮಂಡಳಿಯಲ್ಲಿ ನಡೆದ ಲೋಕಅದಾಲತನಲ್ಲಿ ರಾಜಿಯಾದ ಪ್ರಕರಣಗಳಲ್ಲಿ 200 ಜನ ಉದ್ಯೋಗಿಗಳನ್ನು ಧಾರವಾಡದ ಟಾಟಾ ಮಾರ್ಕೋಪೋಲೊ ಮೋಟಾರ್ಸ್ ಪ್ರೈ.ಲಿ. ಕಂಪನಿಯು ಪುನಃ ಕೆಲಸಕ್ಕೆ ಸೇರಿಸಿಕೊಂಡಿದೆ.

ಲೋಕ್ ಅದಾಲತ್‌ನಲ್ಲಿ ಧಾರವಾಡ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ವಕೀಲರ ಸಂಘಗಳು, ವಿವಿಧ ವಿಮೆ ಕಂಪನಿಯ ಅಧಿಕಾರಿಗಳು, ವಿಮೆ ಕಂಪನಿಯ ಪ್ಯಾನಲ್ ವಕೀಲರು, ಅರ್ಜಿದಾರರ ಪರ ವಕೀಲರು, ಕಂದಾಯದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಕಕ್ಷಿದಾರರು ಭಾಗವಹಿಸಿ ಲೋಕ್ ಅದಾಲತ್‌ನ್ನು ಯಶಸ್ವಿಗೊಳಿಸಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್.ದೊಡ್ಡಮನಿ ತಿಳಿಸಿದ್ದಾರೆ.

ವಿವಿಧ ರೀತಿಯ ಹಾಗೂ ವಿವಿಧ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇದ್ದ, ರಾಜೀ ಆಗಬಹುದಾದಂತಹ 17,995 ಪ್ರಕರಣಗಳನ್ನು ತೆಗೆದುಕೊಂಡು ಅವುಗಳ ಪೈಕಿ 13,284 ಪ್ರಕರಣಗಳನ್ನು ಹಾಗೂ 66,677 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ತೆಗೆದುಕೊಂಡು ಅವುಗಳ ಪೈಕಿ 66,296 ಪ್ರಕರಣಗಳನ್ನು ಸೇರಿ ಒಟ್ಟು 78,488 ರಾಜೀ ಸಂಧಾನ ಮಾಡಿಸಿ, ಒಟ್ಟು ರೂ.19,66,43,493 ಮೊತ್ತವನ್ನು ವಸೂಲು ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here