ಲೋಕಾಯುಕ್ತ ಕಾನೂನುಗಳನ್ನು ಅರಿಯಿರಿ : ಕೆ.ಎನ್. ಫಣೀಂದ್ರ

0
A talk show with lawyers
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮಹತ್ವದ ಕಾನೂನು ರಚನೆ, ತಿದ್ದುಪಡಿಯಲ್ಲಿ ವಕೀಲರ ಪಾತ್ರ ಪ್ರಮುಖವಾಗಿದೆ ಎಂದು ಕರ್ನಾಟಕ ರಾಜ್ಯ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಶನಿವಾರ `ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರ’ದ ಕುರಿತು ವಕೀಲರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲರು ಸಮಾಜಕ್ಕೆ ಹತ್ತಿರವಿರುವ ಲೋಕಾಯುಕ್ತ ಕಾನೂನುಗಳ ಬಗ್ಗೆ ಅರಿಯಬೇಕು. ಇದರಿಂದ ಸಮಾಜದ ಸರ್ವರಿಗೂ ಸಹಾಯ ಮಾಡಲು ಅವಕಾಶವಿದೆ. ಸಂವಿಧಾನಕ್ಕೆ ವಿರುದ್ಧವಾದ ಯಾವುದೇ ಕಾನೂನು ದೇಶದಲ್ಲಿ ಇಲ್ಲ. ಸಮಾಜದಲ್ಲಿ ಎಲ್ಲರಿಗೂ ಉತ್ತಮ ಜೀವನ ನಡೆಸಬೇಕು ಎಂಬುದೇ ಸಂವಿಧಾನದ ಆಶಯ. ಆ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದರು.

ಸಾರ್ವಜನಿಕ ನೌಕರರ ಕರ್ತವ್ಯ, ದುರ್ನಡತೆಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲು ಮತ್ತು ವರದಿ ಮಾಡಲು ಸ್ಥಾಪಿಸಲಾಗಿರುವ ಸಂಸ್ಥೆಯೇ ಕರ್ನಾಟಕ ಲೋಕಾಯುಕ್ತ ಸಂಸ್ಥೆ. ಸಾರ್ವಜನಿಕ ಆಡಳತದಲ್ಲಿ ಗುಣಮಟ್ಟಗಳನ್ನು ಸುಧಾರಿಸುವುದು, ಸಾರ್ವಜನಿಕ/ಸರ್ಕಾರಿ ನೌಕರರ ದುರ್ನಡತೆಯಿಂದ ಸಂಭವಿಸಿದ ಕುಂದುಕೊರತೆಗಳನ್ನು ನಿವಾರಣೆ ಮಾಡುವುದು, ತಪ್ಪಿತಸ್ಥರ ವಿರುದ್ಧ ಶಿಸ್ತಿನ ಕ್ರಮಕ್ಕೆ ಸರ್ಕಾರಕ್ಕೆ, ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡುವುದು ಈ ಸಂಸ್ಥೆಯ ಧ್ಯೇಯೋದ್ದೇಶವಾಗಿದೆ ಎಂದರು.

ಯಾವುದೇ ವ್ಯಕ್ತಿ ಕರ್ನಾಟಕ ರಾಜ್ಯದ ಆಡಳಿತ ನಿರ್ವಹಣೆಯಲ್ಲಿ ನಡೆದಿದೆ ಎಂದು ಹೇಳುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರ್ನಡತೆ, ಅಶಿಸ್ತು ಮತ್ತು ಕರ್ತವ್ಯ ಲೋಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಸಾರ್ವಜನಿಕ, ಸರ್ಕಾರಿ ನೌಕರರ ವಿರುದ್ಧ ಮಾತ್ರ ದೂರು ನೀಡಬಹುದಾಗಿದೆ ಮಾಹಿತಿ ಒದಗಿಸಿದರು.

ಒಂದು ವಾಣಿಜ್ಯ ಸಂಸ್ಥೆಯು ತನ್ನ ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಕ್ರಮ ಅನುಕೂಲವನ್ನು ಪಡೆಯಲು ಸಾರ್ವಜನಿಕ ನೌಕರನಿಗೆ ಅನಗತ್ಯ ಪ್ರಯೋಜನವನ್ನು ನೀಡುವುದು ಅಥವಾ ನೀಡುವುದಾಗಿ ಭರವಸೆ ಕೊಡುವುದು ಮಾಡಿದರೆ ಇಂತಹ ಸಂಸ್ಥೆಯು ಸಹ ಅಪರಾಧವೆಸಗಿದಂತಾಗಿ ಸಂಸ್ಥೆಯ ಮತ್ತು ಸಂಸ್ಥೆಗೆ ಸಂಬಂಧಪಟ್ಟ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶವಿರುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ, ಕರ್ನಾಟಕ ಲೋಕಾಯುಕ್ತ ಸಂಪನ್ಮೂಲ ಅಧಿಕಾರಿ ಪ್ರಕಾಶ ಎಲ್.ನಾಡಗೇರ, ಕರ್ನಾಟಕ ಲೋಕಾಯುಕ್ತ ಉಪನಿಬಂಧಕರಾದ ಅಮರನಾರಾಯಣ ಕೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ ಪಿ.ಎಂ. ಪಾಟೀಲ, ಕರ್ನಾಟಕ ಲೋಕಾಯುಕ್ತ ಗದಗ ಕಚೇರಿಯ ಪೊಲೀಸ್ ಅಧೀಕ್ಷಕ ಸತೀಶ ಚಿಟಗುಬ್ಬಿ, ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ರಾಚಪ್ಪ ತಾಳಿಕೋಟೆ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಜಿ.ಎಸ್. ಪಲ್ಲೇದ ಇದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿ ಪಾಟೀಲ ವಹಿಸಿದ್ದರು. ಜಿಲ್ಲಾ ಕಾನೂನು ಸೆವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಘಟಕ ಮತ್ತು ವಕಿಲರ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಯಾವುದೇ ವ್ಯಕ್ತಿ, ಸಾರ್ವಜನಿಕ, ಸರ್ಕಾರಿ ನೌಕರ ತನ್ನ ಕರ್ತವ್ಯ ಮಾಡದೇ ಇರಲು ಅಥವಾ ಅನುಚಿತವಾಗಿ ಅಥವಾ ಅಪ್ರಮಾಣಿಕವಾಗಿ ಮಾಡಲು ಭ್ರಷ್ಟ ಅಥವಾ ಕಾನೂನು ಬಾಹಿರ ವಿಧಾನಗಳಿಂದ ಅಥವಾ ತನ್ನ ವೈಯಕ್ತಿಕ ಪ್ರಭಾವವನ್ನು ಚಲಾಯಿಸಿ ಆ ಸಾರ್ವಜನಿಕ ನೌಕರನನ್ನು ಪ್ರೇರೇಪಿಸುವುದು ಮತ್ತು ಯಾವುದೇ ವ್ಯಕ್ತಿಗೆ ಅನಗತ್ಯ ಪ್ರಯೋಜನ ನೀಡಲು ಅಥವಾ ತನಗಾಗಿಯೇ ಬೇರೊಬ್ಬ ವ್ಯಕ್ತಿಯಿಂದ ಇನಾಮು ಪಡೆದರೆ, ಪಡೆಯುವುದಕ್ಕೆ ಪ್ರಯತ್ನಿಸಿದರೆ ಅಥವಾ ಸ್ವೀಕಲಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ವಿವರಿಸಿದರು.


Spread the love

LEAVE A REPLY

Please enter your comment!
Please enter your name here