ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅಂಜುಮನ್ ಕಮಿಟಿ ಚುನಾವಣೆಯಲ್ಲಿ ಇಂಕ್ವಿಲಾಬ್ ತಂಡದ 8 ಜನ ಆಯ್ಕೆಯಾಗಿದ್ದು, ಮತ ನೀಡಿದ ಮತದಾರರಿಗೆ, ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಸಮಾರಂಭವನ್ನು ಅ. 5ರಂದು ಸಂಜೆ 6.30ಕ್ಕೆ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕಮಿಟಿ ನೂತನ ಸದಸ್ಯ ಅನ್ವರ ಬಾಗೇವಾಡಿ ತಿಳಿಸಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 17 ವರ್ಷಗಳ ನಂತರ ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆಯಿತು. ಅದರಲ್ಲಿ 8 ಜನ ಇಂಕ್ವಿಲಾಬ್ ತಂಡದ ಸದಸ್ಯರು ಆಯ್ಕೆಯಾಗಿದ್ದಾರೆ. ಹೀಗಾಗಿ, ಮತದಾರರಿಗೆ ಗೌರವಪೂರ್ವಕವಾಗಿ ಕೃತಜ್ಞತೆ ಸಲ್ಲಿಸುವ ಸಂಬಂಧ ಬೃಹತ್ ರಕ್ತದಾನ ಶಿಬಿರ ನಡೆಸಿ, ಕೃತಜ್ಞತಾ ಸಮಾರಂಭವನ್ನು ನಡೆಸಲಾಗುವುದು ಎಂದು ತಿಳಿಸಿದರು.ಈ ಸಭೆಗೆ ಮತದಾರರಷ್ಟೇ ಅಲ್ಲದೆ, ಪ್ರತ್ಯಕ್ಷವಾಗಿ ಮತ್ತು
ಬೆಂಬಲ ಸೂಚಿಸಿದ ಎಲ್ಲರಿಗೂ ಆಹ್ವಾನಿಸಲಾಗಿದೆ. ಸಭೆಯಲ್ಲಿ ಅವರೆಲ್ಲರ ಅಭಿಪ್ರಾಯ, ಸಲಹೆ-ಸೂಚನೆ ಪಡೆದು ಕಾರ್ಯಕ್ರಮ ರೂಪಿಸುವ ಚಿಂತನೆ ಹೊಂದಿದ್ದೇವೆ. ಶೀಘ್ರವೇ ಕಮಿಟಿ ಸಭೆಯನ್ನು ನಡೆಸಿ, ಅಧ್ಯಕ್ಷರ ಆಯ್ಕೆಯನ್ನೂ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಆರ್. ಸೋಂಪುರ, ಅಲ್ತಾಫ್ ಕೊಪ್ಪಳ, ಮಹಮ್ಮದ್ ಸೊಯಲ್ ನಾರಾಯಣಕೇರಿ, ಮೈನುದ್ದೀನ್ ಬಿಜಾಪುರ, ಅನ್ವರಸಾಬ ಮುಲ್ಲಾ, ಮೆಹಬೂಬ ಕದಡಿ ಮುಂತಾದವರು ಉಪಸ್ಥಿತರಿದ್ದರು.