ಚಾಮರಾಜನಗರ: ಸಾಮಾನ್ಯವಾಗಿ ಕಳ್ಳರಿಗೆ ಯಾವುದಕ್ಕೂ ಭಯವಿಲ್ಲ ಎಂಬ ಮಾತಿದೆ. ಆದರೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದ ಘಟನೆ ಎಲ್ಲರನ್ನೂ ಆಶ್ಚರ್ಯಕ್ಕೆ ಒಳಪಡಿಸಿದೆ.
ದೇವಸ್ಥಾನದ ಹುಂಡಿ ಕದಿಯಲು ಬಂದ ಖದೀಮನು, ಕಳ್ಳತನಕ್ಕೂ ಮುನ್ನ ದೇವರಿಗೆ ಕೈ ಮುಗಿದು ಕುಂಕುಮ ಹಚ್ಚಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗ್ರಾಮದ ಶಕ್ತಿ ದೇವತೆ ಪಟ್ಟದರಾಣಿ ದೇವಾಲಯದಲ್ಲಿ ಈ ಕಳ್ಳತನ ನಡೆದಿದ್ದು, ಈ ಹಿಂದೆಯೂ ಹುಂಡಿ ಹಣ ಕಳುವಾಗಿದ್ದ ಕಾರಣದಿಂದ ದೇವಸ್ಥಾನದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ಅದರಲ್ಲೇ ಈ ಘಟನೆಯ ಸಂಪೂರ್ಣ ದೃಶ್ಯ ದಾಖಲಾಗಿದೆ.
ಘಟನೆ ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.



