ಗದಗ: ಜಿಲ್ಲೆಯಲ್ಲಿ ಮಳೆಯ ಅವಾಂತರ ಮುಂದುವರಿದಿದೆ. ಭೀಕರ ಬಿರುಗಾಳಿಗೆ ಕಬ್ಬಿಣದ ಎಂಗಲರ್ ಸಮೇತ ತಗಡಿನ ಶೀಟ್ ಹಾರಿ ಹೋಗಿದ್ದು, ಕೂದಲೆಳೆ ಅಂತರದಲ್ಲಿ ಬಾಣಂತಿ, ಹಸುಗೂಸು ಸೇರಿ ನಾಲ್ಕು ಮಂದಿ ಬಚಾವ್ ಆಗಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ ತಾಂಡಾದಲ್ಲಿ ಜರುಗಿದೆ.
ಪ್ಲೈವುಡ್ ಶೀಟ್ ಗೆ ತಗಡಿನ ಶೀಟ್ ಟಚ್ ಆದ ಕಾರಣ ದುರಂತ ತಪ್ಪಿದ್ದು, ಬಾಣಂತಿ ಸುಮಾ ಲಮಾಣಿ, ಹಸುಕೂಸು ಬಚಾವ್ ಆಗಿದ್ದಾರೆ. ಅಲ್ಲದೇ ಘಟನೆಯಿಂದ ಎಂಟು ವರ್ಷದ ಬಾಲಕಿ ಪವಿತ್ರಾ ತಲೆಗೆ ಗಾಯವಾಗಿದೆ. ಇನ್ನೂ ಬಿರುಗಾಳಿಯಿಂದ ಭಯಭೀತರಾಗಿದ್ದ ಅಜ್ಜಿ, ಮೊಮ್ಮಗ ದೇವರ ಮನೆ ಸೇರಿ ಬಚಾವ್ ಆಗಿದ್ದಾರೆ.
ಮನೆಯಲ್ಲಿ ಚಹಾ ಕುಡಿಯುವಾಗ ಬಿರುಗಾಳಿಗೆ ತಗಡಿನ ಶೀಟ್ ಹಾರಿ ಹೋಗಿದೆ. ತಕ್ಷಣ ಅಲರ್ಟ್ ಆದ ಮೊಮ್ಮಗ ಆನಂದ, ಅಜ್ಜಿ ರುದ್ರವ್ವ ಲಮಾಣಿ ದೇವರ ಕೋಣೆಯಲ್ಲಿ ಆಶ್ರಯ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಬಳಿಕ ಮಾತನಾಡಿದ ಅಜ್ಜಿ ರುದ್ರವ್ವ, ರಕ್ಕಸ ಬಿರುಗಾಳಿ, ಮಳೆ ಅಬ್ಬರ ನೆನೆದು ಕಣ್ಣೀರು ಹಾಕಿದ್ದಾರೆ. ದೇವರ ಕೋಣೆಯಲ್ಲಿ ಆಶ್ರಯ ಪಡೆದು ಬದುಕಿದೇವು. ಇಂಥ ಬಿರುಗಾಳಿ ನಾನು ಎಂದು ನೋಡಿಲ್ಲ. ಅದನ್ನು ನೆನೆಸಿಕೊಂಡರೆ ಭಯ ಆಗುತ್ತೆ ಎಂದು ಗಳಗಳನೆ ಅಜ್ಜಿ ರುದ್ರವ್ವ ಕಣ್ಣೀರು ಹಾಕಿದ್ದಾರೆ. ಇನ್ನೂ ಗೋವಾಕ್ಕೆ ದುಡಿಯಲು ಹೋಗಿದ್ದ ಆನಂದ ತಾಯಿ ಸೋಮವ್ವ ಲಮಾಣಿ ಅವರು ಘಟನೆ ವಿಷಯ ತಿಳಿದು ಗ್ರಾಮಕ್ಕೆ ಬಂದಿದ್ದಾರೆ. ಅಲ್ಲದೇ ಮನೆಯ ಸ್ಥಿತಿ ಕಂಡು ದುಃಖ ಹೊರ ಹಾಕಿದರು.
ನೆಲಕಚ್ಚಿದ ನೂರಾರು ಎಕರೆ ಭತ್ತ!
ಇನ್ನೂ ಜಿಲ್ಲೆಯಲ್ಲಿ ಸುರಿಯುತ್ತಿರುವ ಭೀಕರ ಗಾಳಿ-ಮಳೆಗೆ ಬಡವರ ಬದುಕು ಮೂರಾಬಟ್ಟೆ ಆಗಿದ್ದು, ಒಂದಿಲ್ಲೊಂದು ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಅದರಂತೆ ಜಿಲ್ಲೆಯಲ್ಲಿ ಸುರಿದ ಭೀಕರ ಬಿರುಗಾಳಿ ಮಳೆಗೆ ಕಟಾವಿಗೆ ಬಂದಿದ್ದ ನೂರಾರು ಎಕರೆ ಭತ್ತ ಸಂಪೂರ್ಣ ಹಾನಿಯಾಗಿದ್ದು, ರೈತ ಕಂಗಾಲಾಗಿದ್ದಾನೆ.
ಈ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ, ಸಾಸಲವಾಡ ಗ್ರಾಮದಲ್ಲಿ ಜರುಗಿದೆ. ಪಾಪ ರೈತ ಲಕ್ಷಾಂತರ ಖರ್ಚು ಮಾಡಿದ್ದ. ಸಮೃದ್ಧವಾಗಿ ಬೆಳೆದಿದ್ದ ಭತ್ತ ಬೆಳಗಾಗುವುದರೊಳಗೆ ಬೆಳೆ ನೆಲಕಚ್ಚಿದ್ದು, ರೈತ ಕಂಗಾಲಾಗಿದ್ದಾನೆ.