ಬೆಂಗಳೂರು: ಕರ್ನಾಟಕ ಹೈಕೋರ್ಟ್ನ ನಾಲ್ವರು ಪ್ರಮುಖ ನ್ಯಾಯಮೂರ್ತಿಗಳನ್ನು ಸೇರಿ ಏಳು ನ್ಯಾಯಮೂರ್ತಿಗಳನ್ನು ದೇಶದ ಇತರೆ ಹೈಕೋರ್ಟ್ಗಳಿಗೆ ವರ್ಗಾವಣೆ ಮಾಡಲಾಗಿದೆ. ಸುಪ್ರೀಂಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿಗಳ ವರ್ಗಾವಣೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಕರ್ನಾಟಕದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರನ್ನು ಒಡಿಶಾ, ನ್ಯಾಯಮೂರ್ತಿ ಕೆ.ನಟರಾಜನ್ ಅವರನ್ನು ಕೇರಳ, ನ್ಯಾಯಮೂರ್ತಿ ಎನ್.ಎಸ್.ಸಂಜಯ್ ಗೌಡ ಅವರನ್ನು ಗುಜರಾತ್ ಹಾಗೂ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರನ್ನು ಮದ್ರಾಸ್ ಹೈಕೋರ್ಟ್ಗೆ ವರ್ಗಾಯಿಸಿಲು ಕೊಲಿಜಿಯಂ ಶಿಫಾರಸು ಮಾಡಿದೆ.
ಅಲ್ಲದೆ, ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿ ಪೆರುಗು ಶ್ರೀ ಸುಧಾ ಮತ್ತು ಆಂಧ್ರ ಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಡಾ.ಕುಂಭಜದಲ ಮನ್ಮಧ ರಾವ್ ಅವರನ್ನು ಕರ್ನಾಟಕ ಹೈಕೋರ್ಟ್ಗೆ ಹಾಗೂ ತೆಲಂಗಾಣದ ನ್ಯಾಯಮೂರ್ತಿ ಕಸುಜು ಸುರೇಂದರ್ ಅಲಿತಾಸ್ ಕೆ.ಸುರೇಂದರ್ ಅವರನ್ನು ಮದ್ರಾಸ್ ಹೈಕೋರ್ಟ್ಗೆ ವರ್ಗಾಯಿಸಲು ಶಿಫಾರಸು ಮಾಡಲಾಗಿದೆ.
ನ್ಯಾಯಾಂಗ ವ್ಯವಸ್ಥೆಯ ಗುಣಮಟ್ಟ ಸುಧಾರಿಸಲು ಹಾಗೂ ವೈವಿಧ್ಯತೆ ಕಾಪಾಡುವ ನಿಟ್ಟಿನಲ್ಲಿ ಏಪ್ರಿಲ್ 15 ಮತ್ತು 19ರಂದು ನಡೆದ ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲಿ ವರ್ಗಾವಣೆ ಶಿಫಾರಸು ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿಕೆಯಲ್ಲಿ ತಿಳಿಸಿದೆ.