ಬೆಂಗಳೂರು: ನವೀಕರಣ ಕಾಮಗಾರಿಗಾಗಿ ಅಳವಡಿಸಿದ್ದ ಸಾರವೆ ಮರ ಏಕಾಏಕಿ ಕುಸಿದು ಭಾರೀ ಅವಘಡ ಸಂಭವಿಸಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ಸಮೀಪ ಜರುಗಿದೆ.
ಇಂದು (ಸೋಮವಾರ) ರಾತ್ರಿ ಸುಮಾರು 9.10ರ ವೇಳೆಗೆ ನಡೆದ ಈ ಘಟನೆ ವೇಳೆ ರಸ್ತೆಯಲ್ಲಿ ನಿಂತಿದ್ದ ಮೂವರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಾರವೆ ಮರ ಪತನದಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕೆಲ ಬೈಕ್‌ಗಳು ಜಖಂಗೊಂಡಿದ್ದು, ಅಕ್ಕಪಕ್ಕದ ಕೆಲವು ಅಂಗಡಿಗಳ ಮೇಲೂ ಮರ ಬಿದ್ದಿದೆ. ಜೊತೆಗೆ ಎರಡು ಖಾಸಗಿ ಬಸ್‌ಗಳಿಗೆ ಹಾನಿಯಾಗಿದ್ದು, ಅವುಗಳ ಗಾಜುಗಳು ಒಡೆದಿವೆ.
ಈ ಘಟನೆಯಿಂದ ಭಯಭೀತರಾದ ಜನರು ದಿಕ್ಕಾಪಾಲಾಗಿ ಓಡಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಘಟನೆ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ಉಪ್ಪಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವಘಡದ ಪರಿಣಾಮ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಎದುರಾಯಿತು.



