‘ಯಾನ’ದಿಂದ ‘ದೂರ ಸರಿದ’ ಸಾಹಿತ್ಯದ ಮೇರು ಶಿಖರಕ್ಕೆ ನುಡಿ ನಮನ

0
Oplus_0
Spread the love

ನಾಡಹಬ್ಬದ ಪರ್ವಕಾಲದಲ್ಲಿಯೇ ನಾಡಿನ ಶ್ರೇಷ್ಠ ಸಾಹಿತ್ಯ ವಂಶವೃಕ್ಷದ ತಂತುವೊಂದು ಅಂತ್ಯ ಕಂಡಿದೆ. ದೇಶ ವಿದೇಶಗಳಲ್ಲಿ ಕನ್ನಡ ಹಾಗೂ ಕನ್ನಡತನದ ಸಾಹಿತ್ಯದ ಲಾಲಿತ್ಯಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟ ಶ್ರೇಷ್ಠ ಬರಹಗಾರ ತನ್ನ ಬೆರಗಿನ ಬರವಣಿಗೆಯ ಲೇಖನಿಗೆ ಶಾಶ್ವತ ವಿರಾಮ ನೀಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡದ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವ, ರಾಷ್ಟ್ರದ ಅತ್ಯುನ್ನತ ಗೌರವಗಳಾದ ಪದ್ಮಭೂಷಣ, ಪದ್ಮಶ್ರೀ ಹಾಗೂ ನಾಡಿನ ಉನ್ನತ ನಾಡೋಜ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಲೇಖಕ, ಚಿಂತಕ, ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ತಮ್ಮ ಇಹಲೋಕ ಯಾನವನ್ನು ಸಂಪನ್ನಗೊಳಿಸಿದ್ದಾರೆ.

Advertisement

ಭೈರಪ್ಪ 1931ರ ಆಗಸ್ಟ್ 20ರಂದು ಚನ್ನರಾಯಪಟ್ಟಣದ ಬಳಿಯ ಸಂತೆ ಶಿವರದಲ್ಲಿ ಜನಿಸಿದರು. ತಂದೆ ಲಿಂಗಣ್ಣಯ್ಯ ಹಾಗೂ ತಾಯಿ ಗೌರಮ್ಮ. ಬಾಲ್ಯದ ಶಿಕ್ಷಣವನ್ನು ತಮ್ಮ ಗ್ರಾಮ ಹಾಗೂ ಸುತ್ತಮುತ್ತಲಿನ ಊರಿನಲ್ಲಿಯೇ ಪೂರೈಸಿಕೊಂಡರು. ಭೈರಪ್ಪನವರು ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರ – ಈ ಎಲ್ಲಾ ಪ್ರತಿಕೂಲ ಸಂದರ್ಭಗಳ ನಡುವೆಯೂ ಸಣ್ಣ ವಯಸ್ಸಿನಿಂದಲೇ, ಅವರ ‘ಗೃಹಭಂಗ’ ಕಾದಂಬರಿಯಲ್ಲಿ ನಂಜಮ್ಮನ ಪಾತ್ರದಲ್ಲಿ ಕಾಣಬಹುದಾದ ತಮ್ಮ ತಾಯಿಯಲ್ಲಿದ್ದ ಧೀಮಂತಿಕೆಯನ್ನು ಮೈಗೂಡಿಸಿಕೊಂಡರು.

ವಯಸ್ಸು 11ರ ಆಸುಪಾಸಿನಲ್ಲಿ ಅವರ ತಾಯಿಯೂ ಬಡತನ ಹಾಗೂ ಪ್ಲೇಗ್‌ಗಳಿಗೆ ಜೀವವನ್ನು ಬಿಟ್ಟುಕೊಟ್ಟಾಗ, ಬದುಕಿನ ವಿಶ್ವವಿಶಾಲತೆಯ ಈ ರಂಗದಲ್ಲಿ ತಮ್ಮ ಸಾಹಸಮಯವಾದ ಬದುಕನ್ನು ತಾವೇ ನಿರ್ಮಿಸಿಕೊಳ್ಳತೊಡಗಿದರು. ಪರಿಸ್ಥಿತಿ ಇಷ್ಟೊಂದು ಕಠಿಣಾತಿ ಕಠಿಣವಾಗಿದ್ದರೂ ಒಂದಿಷ್ಟು ಧೃತಿಗೆಡದ ಭೈರಪ್ಪ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದರು. ಗೃಹಭಂಗ, ಅನ್ವೇಷಣ ಕಾದಂಬರಿಗಳು ಮತ್ತು ಭಿತ್ತಿ ಎಂಬ ಆತ್ಮಚರಿತ್ರೆಯಲ್ಲಿನ ಅವರ ಬದುಕಿನ ಈ ಭಾಗಗಳನ್ನು ಓದುವುದೇ ಒಂದು ರೋಮಾಂಚನಕಾರಿ ಅನುಭವ.

ಶುದ್ಧ ಮೌಲ್ಯಗಳ ದೃಷ್ಟಿಯಿಂದ ಗಾಂಧೀಜಿ ಒಬ್ಬರನ್ನೇ ಮಹೋನ್ನತ ನಾಯಕರೆಂದು ಪರಿಗಣಿಸುವ ಭೈರಪ್ಪನವರು ಕೇವಲ ತಮ್ಮ 13ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೆಂಡದ ಲಾರಿಗಳನ್ನು ತಡೆದು ಪೊಲೀಸ್ ಸ್ಟೇಷನ್ನಿಗೆ ಹೋದರು. ಆ ಕುರಿತು ಜಾಗೃತಿ ಮೂಡಿಸುವ ಭಾಷಣಗಳನ್ನು ಮಾಡಿದವರು. ಸಿನಿಮಾ ಟೆಂಟ್‌ಲ್ಲಿ ಬಾಗಿಲು ಕಾಯುವ ಕೆಲಸದಿಂದ ಹಿಡಿದು ಅವರು ಮಾಡಿದ ಕೆಲಸ ಅನೇಕ. ಎಲ್ಲೋ ಬದುಕು ಕ್ಷುಲ್ಲಕತೆಯ ಕಡೆಗೆ ಸಾಗಿದೆ ಅನಿಸಿ ತಮ್ಮ ಬದುಕಿನ ಅನ್ವೇಷಣೆಯತ್ತ ಮುಖ ಮಾಡಿದರು.

ಮೈಸೂರಿನ ಹಲವು ಹಾಸ್ಟೆಲ್‌ಗಳು ಮತ್ತು ಅಂದಿನ ಕೆಲವೊಂದು ಸಜ್ಜನರ ಕೃಪೆಗಳಲ್ಲಿ ಬದುಕು ಸಾಗಿಸಿದ ಭೈರಪ್ಪನವರು ಮೈಸೂರಿನ ಶಾರದ ವಿಲಾಸ ಪ್ರೌಢಶಾಲೆಯಲ್ಲಿ ಓದಿದ ಮೇಲೆ ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯಾಗಿ 1957ರಲ್ಲಿ ಬಿ.ಎ.ಆನರ್ಸ್ ಪದವಿ ಗಳಿಸಿದರು. 1958ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯಲ್ಲಿ ಪ್ರಥಮ ಶ್ರೇಣಿಯ ಸಾಧನೆ ಮಾಡಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದಿಂದ ‘ಸತ್ಯ ಮತ್ತು ಸೌಂದರ್ಯ’ ಎಂಬ ಇಂಗ್ಲಿಷಿನಲ್ಲಿ ರಚಿಸಿದ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಎಂ.ಎ. ವಿದ್ಯಾಭ್ಯಾಸದ ನಂತರ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ತರ್ಕಶಾಸ್ತ್ರ ಮತ್ತು ಮನಃಶಾಸ್ತ್ರದ ಅಧ್ಯಾಪಕರಾಗಿ, ನಂತರ 1960ರಿಂದ 1966ರವರೆಗೆ ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 1967ರಿಂದ 1971ರವರೆಗೆ ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಮೀಮಾಂಸಾ ವಿಷಯದಲ್ಲಿ ಉಪ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ಮೈಸೂರಿನಲ್ಲಿರುವ ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿ 1991ರಲ್ಲಿ ನಿವೃತ್ತರಾದರು.

ಭೈರಪ್ಪನವರ ಕಾದಂಬರಿಗಳಲ್ಲಿ ಕಾಣುವ ಬದುಕಿನ ಪಾತ್ರಗಳು ಎಲ್ಲೆಲ್ಲೂ ನಮ್ಮ ಕಣ್ಣ ಮುಂದೆ ಕಾಣುತ್ತಿರುವ ವ್ಯಕ್ತಿಗಳ ಹಾಗೇ ಇರುತ್ತವೆ. ಇದು ಅವರ ಮಹಾಭಾರತವನ್ನು ಇಂದಿನ ಕಾಲಕ್ಕೆ ಹೊಂದಿಸಿ ನೋಡುವಂತಹ ‘ಪರ್ವ’ ಕಾದಂಬರಿಯಂತಹ ಪಾತ್ರಗಳಲ್ಲೂ ಕಾಣಬರುತ್ತವೆ. ಅವರ ಕಾದಂಬರಿಗಳ ಭಾಷೆಯಲ್ಲಿರುವ ಗ್ರಾಮೀಣ, ನಗರ ಮತ್ತು ಇತ್ತೀಚಿನ ಆಧುನಿಕತೆಯವರೆಗಿನ ವರಸೆಯ ಸೊಗಡುಗಳಂತೂ ನಮ್ಮನ್ನು ಅಪೂರ್ವ ರೀತಿಯಲ್ಲಿ ಹಿಡಿದಿಟ್ಟುಕೊಂಡುಕೊಂಡು ಬಿಡುತ್ತವೆ. ಈ ವಿಷಯಗಳಲ್ಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ.

ಭೈರಪ್ಪ ಅವರ ಅನೇಕ ಕಾದಂಬರಿಗಳು ಭಾರತೀಯ ಇತರ ಭಾಷೆಗಳು ಮತ್ತು ಇಂಗ್ಲಿಷ್‌ಗೆ ಅನುವಾದಗೊಂಡಿವೆ. ಭೈರಪ್ಪ ಕಳೆದ 25 ವರ್ಷಗಳಿಂದ ಕನ್ನಡದಲ್ಲಿ ಹೆಚ್ಚು ಮಾರಾಟವಾದ ಲೇಖಕರಲ್ಲಿ ಒಬ್ಬರಾಗಿದ್ದಾರೆ ಮತ್ತು ಅವರ ಪುಸ್ತಕಗಳ ಅನುವಾದಗಳು ಕಳೆದ ಎಂಟು ವರ್ಷಗಳಿಂದ ಮರಾಠಿಯಲ್ಲಿ ಮತ್ತು ಕಳೆದ ಐದು ವರ್ಷಗಳಿಂದ ಹಿಂದಿಯಲ್ಲಿ ಹೆಚ್ಚು ಮಾರಾಟವಾಗಿರುವುದು ಗಮನಾರ್ಹ.

ಪದ್ಮಶ್ರೀ ಪ್ರಶಸ್ತಿ (ಭಾರತ ಸರ್ಕಾರ, 2013), ಪದ್ಮಭೂಷಣ ಪ್ರಶಸ್ತಿ-2023, ಸಾಹಿತ್ಯ ಅಕಾಡೆಮಿ ಫೆಲೋಶಿಪ್ (ಭಾರತ ಸರ್ಕಾರ, 2015), ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕ (ಭಾರತ ಸರ್ಕಾರ, 2014), ಸರಸ್ವತಿ ಸಮ್ಮಾನ್-2010, ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಭಾರತ ಸರ್ಕಾರ, 1975), ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ (2015), ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ (2014), ವಾಗ್ವಿಲಾಸಿನಿ ಪುರಸ್ಕಾರ (ದೀನನಾಥ್ ಮೆಮೋರಿಯಲ್ ಫೌಂಡೇಶನ್, ಪುಣೆ, 2012), ನಾಡೋಜ ಪ್ರಶಸ್ತಿ (2011), ಎನ್ಟಿಆರ್ ರಾಷ್ಟ್ರೀಯ ಪ್ರಶಸ್ತಿ (2007), ಗುಲ್ಬರ್ಗ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ (2007), ಪಂಪ ಪ್ರಶಸ್ತಿ (2005), ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ (1999), ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕರ್ನಾಟಕ ಸರ್ಕಾರ, 1966) ಹೀಗೆ ಅನೇಕ ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ.

ಹತ್ತು ಹಲವು ಚಿಂತನೆಗಳ ಬದುಕಿನ ರೀತಿ ಮತ್ತು ವೈರುಧ್ಯಗಳ ಸಮಾಜದಲ್ಲಿ ಭೈರಪ್ಪನವರು ಎಲ್ಲ ರೀತಿಯ ವಿಚಾರಗಳನ್ನು ಮುಕ್ತತೆ, ಸತ್ಯದ ಆಧಾರತೆ ಮತ್ತು ನಿಷ್ಠುರತೆಗಳೊಂದಿಗೆ ಮಂಡಿಸುವದರೊಂದಿಗೆ ಹಲವು ರೀತಿಯ ಟೀಕಾಕಾರರಿಗೆ ಯಾವುದೇ ರೀತಿಯ ಸೊಪ್ಪು ಹಾಕದೆ ಸ್ಪಷ್ಟ ಉತ್ತರಗಳನ್ನೂ ನೀಡುತ್ತಾ ಸಾಗಿದ್ದರು. ಅವರು ಶತಮಾನಕ್ಕೆ ಒಬ್ಬರು. ತಮ್ಮ ಕೊನೆಯ ಉಸಿರಿನವರೆಗೂ ಕನ್ನಡ, ಕನ್ನಡ ಸಾಹಿತ್ಯ, ರಾಷ್ಟ್ರೀಯ ಚಿಂತನೆಗಳಿಗೆ ತಮ್ಮನ್ನು ತಮ್ಮ ಸಮರ್ಪಿಸಿಕೊಂಡ ಈ ಹಿರಿಯ ಚೇತನ ಇಂದು ಇಲ್ಲವಾಗಿರುವುದು ಸಾಹಿತ್ಯ ವಲಯದಲ್ಲಿ ಬಹುದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ. ಹೋಗಿ ಬನ್ನಿ, ನಿಮಗಿದು ನುಡಿ ನಮನ…

– ಈಶ್ವರ ಎಸ್. ಮೆಡ್ಲೇರಿ,
ಅಧ್ಯಕ್ಷರು, ಕಸಾಪ, ಲಕ್ಷ್ಮೇಶ್ವರ

 


Spread the love

LEAVE A REPLY

Please enter your comment!
Please enter your name here