ವಿಜಯಸಾಕ್ಷಿ ಸುದ್ದಿ, ಗದಗ: ಎಲ್ಲೆಡೆ ಗಣೇಶೋತ್ಸವದ ಸಂಭ್ರಮ ಮನೆಮಾಡಿದೆ. ಈ ನಡುವೆ ಗದಗ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ಹೃದಯಸ್ಪರ್ಶಿ ಘಟನೆ ಎಲ್ಲರ ಗಮನ ಸೆಳೆಯುತ್ತಿದೆ. ದೇಶದಲ್ಲಿ ಕೋಮು ದಳ್ಳುರಿ ಹೊತ್ತಿ ಉರಿಯುತ್ತಿದೆ. ಜಾತಿ ಜಾತಿಗಳ ನಡುವೆ ಹೊಡೆದಾಟ, ಗದ್ದಲ, ಗಲಾಟೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ, ಗದಗ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ಮಾತ್ರ ಜಾತಿ, ಪಂಥ, ಬೇಧ ಇಲ್ಲದೇ ಎಲ್ಲರೂ ಒಗ್ಗಟ್ಟಿನಿಂದ, ಸಡಗರ, ಸಂಭ್ರಮದಿಂದ ಗಣೇಶೋತ್ಸವ ಆಚರಿಸುತ್ತಾರೆ.
ಕಳಸಾಪೂರ ಗ್ರಾಮದಲ್ಲಿ ವಿಘ್ನೇಶ್ವರನಿಗೆ ಒಂದು ಕಡೆ ಹಿಂದೂ ಮಹಿಳೆ ಮತ್ತೊಂದು ಕಡೆ ಮುಸ್ಲಿಂ ಮಹಿಳೆ ಆರತಿ ಮಾಡುವ ದೃಶ್ಯ ದೇಶಕ್ಕೆ ಭಾವೈಕ್ಯತೆ ಸಂದೇಶ ಸಾರುವಂತಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ಅಂಜುಮನ್-ಎ-ಇಸ್ಲಾಂ ಕಮಿಟಿ ಹಾಗೂ ಈಶ್ವರ ಬಸವಣ್ಣ ದೇವಾಲಯದ ಕಮಿಟಿ. ಈ ಎರಡು ಕಮಿಟಿಗಳ ಸಹಯೋಗದಲ್ಲಿ ಪ್ರತಿವರ್ಷ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ದೇವನೊಬ್ಬ ನಾಮ ಹಲವು ಎಂಬ ನಂಬಿಕೆಯಲ್ಲಿ ಇಲ್ಲಿನ ಮುಸ್ಲಿಂ ಬಾಂಧವರು, ಹಿಂದೂಗಳ ಜೊತೆ ಸೇರಿ ವಿಘ್ನ ನಿವಾರಕನನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಿತ್ಯವೂ ಹಿಂದೂ-ಮುಸ್ಲಿಂ ಬಾಂಧವರು ಸೇರಿ ಸಾಮೂಹಿಕವಾಗಿ ಪೂಜೆ ಸಲ್ಲಿಸುತ್ತಾರೆ.
ಶಾಂತಿ-ಸೌಹಾರ್ದತೆಗೆ ಹೆಸರಾದ ಕಳಸಾಪೂರ ಗ್ರಾಮ, ಈಗ ಭಾವೈಕ್ಯೆತೆಯ ಕೇಂದ್ರ ಬಿಂದುವಾಗಿದೆ. ವರ್ಷದಿಂದ ವರ್ಷಕ್ಕೆ ಕಳಸಾಪುರದ ಭಾವೈಕ್ಯತಾ ಗಣೇಶ ಗ್ರಾಮಸ್ಥರಲ್ಲಿ ಒಗ್ಗಟ್ಟನ್ನು ಹೆಚ್ಚಿಸುತ್ತಿದ್ದಾನೆ. ಇಡೀ ರಾಜ್ಯಾದ್ಯಂತ ಕಳಸಾಪುರ ಭಾವೈಕ್ಯತೆಗೆ ಕಳಸಪ್ರಾಯವಾಗಿದೆ ಎಂಬ ಭಾವನೆಯನ್ನು ಸ್ಥಳೀಯರಲ್ಲಿ ಮೂಡಿಸುತ್ತಿದೆ. ಹಿಂದೂ-ಮುಸ್ಲಿಮರು ಒಟ್ಟಾಗಿಯೇ ರಂಜಾನ್, ಈದ್ ಮಿಲಾದ್, ಮೊಹರಂ, ದಸರಾ ಹೀಗೆ ಎಲ್ಲಾ ಹಬ್ಬಗಳನ್ನು ಆಚರಿಸುವ ಮೂಲಕ ಸಬ್ ಕಾ ಮಾಲೀಕ್ ಏಕ್ ಹೈ ಎಂಬ ಮಾತನ್ನು ಕಳಸಾಪುರ ಗ್ರಾಮಸ್ಥರು ಸಾಬೀತು ಮಾಡುತ್ತಿದ್ದಾರೆ. ಗ್ರಾಮದಲ್ಲಿ ನಡೆಯುವ ಎಲ್ಲ ಹಬ್ಬಗಳನ್ನು ಇಲ್ಲಿನ ಜನರು ಜಾತಿ, ಮತ, ಪಂಥವಿಲ್ಲದೇ ಆಚರಣೆ ಮಾಡುತ್ತ ಬರುತ್ತಿರುವುದು ಅತ್ಯಂತ ಖುಷಿಯ ಸಂಗತಿ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಅಂಜುಮನ್ ಕಮಿಟಿ ಹಾಗೂ ಈಶ್ವರ ದೇವಸ್ಥಾನದ ಕಮಿಟಿಯ ಸದಸ್ಯರು, ಎಲ್ಲಾ ಖರ್ಚು ವೆಚ್ಚಗಳಿಗೆ ಮೊದಲೇ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹ ಮಾಡುತ್ತಾರೆ. ಎಲ್ಲರೂ ಕೆಲಸಗಳನ್ನು ಹಂಚಿಕೊಂಡು ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಒಟ್ಟಾರೆ, ಇಂತಹ ಸಾಮರಸ್ಯದ ಬದುಕು ಹಾಗೂ ಆಚರಣೆ ಎಲ್ಲರಿಗೂ ಮಾದರಿಯಾಗಿದೆ.
ಸತತ 15 ವರ್ಷಗಳಿಂದ ಅಂಜುಮನ್-ಎ-ಇಸ್ಲಾಂ ಹಾಗೂ ಈಶ್ವರ ದೇವಾಲಯ ಕಮಿಟಿಯವರು ಜಂಟಿಯಾಗಿ ಏಕದಂತನನ್ನು ಪೂಜಿಸುತ್ತ ಬಂದಿದ್ದು, ಒಟ್ಟಿಗೆ ಹಬ್ಬ ಆಚರಿಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.