ವಿಜಯಸಾಕ್ಷಿ ಸುದ್ದಿ, ರೋಣ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಎಲ್ಲ ಸಮುದಾಯಗಳ ಹಿತವನ್ನು ಬಯಸಿ ಒಳ ಮಿಸಲಾತಿಯನ್ನು ಜಾರಿಗೊಳಿಸಿದ್ದು, ದಶಕಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಸೋಮವಾರ ಪರಿಶಿಷ್ಟ ಜಾತಿ ಸಮುದಾಯದವರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸಮುದಾಯದ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಒಳ ಮಿಸಲಾತಿ ಜಾರಿಯಾಗಬೇಕು ಎಂಬ ಕೂಗು ಹಲವು ದಶಕಗಳದ್ದು. ವಿಪರ್ಯಾಸವೆಂದರೆ, ಬಿಜೆಪಿ ಅಥವಾ ಜೆಡಿಎಸ್ ಪಕ್ಷಗಳು ಅಧಿಕಾರದಲ್ಲಿದ್ದಾಗ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಲಿಲ್ಲ. ಬದಲಾಗಿ ಇಲ್ಲ-ಸಲ್ಲದ ಸಬೂಬುಗಳನ್ನು ಹೇಳುತ್ತಾ ಸಮಾಜದಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಿದರು. ಆದರೆ ಕಾಂಗ್ರೆಸ್ ಸರಕಾರ ತಾನು ಕೊಟ್ಟ ಮಾತಿನಂತೆ ಯಾವುದೇ ಸಮುದಾಯಗಳಿಗೆ ಅನ್ಯಾಯವಾಗದ ರಿತಿಯಲ್ಲಿ ಒಳ ಮಿಸಲಾತಿಯನ್ನು ಹಂಚಿಕೆ ಮಾಡುವ ಜೊತೆಗೆ ಸಾಮಾಜಿಕ ನ್ಯಾಯ ಒದಗಿಸುವ ಕಾರ್ಯ ಮಾಡಿದ್ದು ಸ್ವಾಗತರ್ಹವಾಗಿದೆ ಎಂದರು.
ಮುಖಂಡ ಶರಣು ಪೂಜಾರ ಮಾತನಾಡಿ, ಸರಕಾರ ಎಲ್ಲ ಸಮುದಾಯಗಳನ್ನು ಏಕತೆಯಿಂದ ಕಾಣಬೇಕು. ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಯಾವುದೇ ಸಮಾಜಕ್ಕೆ ಅನ್ಯಾಯವಾಗದ ರೀತಿಯಲ್ಲಿ ನ್ಯಾಯಸಮ್ಮತವಾಗಿ ಒಳ ಮಿಸಲಾತಿಯನ್ನು ಜಾರಿಗೊಳಿಸಿದೆ. ಇದು ನಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಬೆಳಕು ನೀಡಲಿದ್ದು, ರಾಜ್ಯ ಸರಕಾರದ ನಿರ್ಧಾರವನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದೇವೆ. ಒಳ ಮೀಸಲಾತಿ ಹೋರಾಟಕ್ಕೆ ಶಕ್ತಿ ತುಂಬಿದ್ದು ಶಾಸಕ ಜಿ.ಎಸ್.ಪಾಟೀಲರು. ಹೀಗಾಗಿ ಅವರನ್ನು ಇಂದು ಸಮಾಜದ ವತಿಯಿಂದ ಸತ್ಕರಿಸಲಾಗಿದೆ ಎಂದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಹನ್ಮಂತ ನಾಗರಾಜ, ವಿಜಯ ಕಲ್ಮನಿ, ಪ್ರಕಾಶ ಹೊಸಳ್ಳಿ, ಸೋಮು ನಾಗರಾಜ, ಮೈಲಾರಪ್ಪ ಚಳ್ಳಮರದ, ಸಂಗಪ್ಪ ಹುಲ್ಲೂರ, ಅಂದಪ್ಪ ದ್ವಾಸಲ, ಬಾಳಪ್ಪ ಬುರಡಿ, ಸುರೇಶ ನಡವಿನಮನಿ, ಸಿದ್ದಪ್ಪ ಹಲಗಿ, ಶಿವಪ್ಪ ಮಾದರ, ಬಸವರಾಜ ಕಡಬಿನ, ಶರಣಪ್ಪ ದೊಡ್ಡಮನಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷ ಸಂವಿಧಾನದ ಅಡಿಯಲ್ಲಿ ತನ್ನ ಕಾರ್ಯವನ್ನು ನಿರ್ವಹಿಸುತ್ತಾ ಬಂದಿದೆ. ಸಮಾಜದ ಎಲ್ಲ ವರ್ಗದ ಜನರಿಗೂ ನ್ಯಾಯ ಒದಗಿಸಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ಮೊದಲ ಆಶಯ. ಸಂವಿಧಾನದ ಪರಿಕಲ್ಪನೆಯಂತೆ ಸರಕಾರ ಒಳ ಮಿಸಲಾತಿಯನ್ನು ಜಾರಿಗೊಳಿಸಿದ್ದು, ಇದರಿಂದ ಯಾವುದೇ ಸಮುದಾಯಗಳಿಗೆ ಅನ್ಯಾಯವಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮಿಸಲಾತಿ ಜಾರಿಗೊಳಿಸಿರುವುದನ್ನು ಎಲ್ಲರೂ ಸ್ವಾಗತಿಸಿದ್ದಾರೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.