ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ನಿರ್ಮಿಸಿದ್ದ ಪೊಲೀಸ್ ಕಣ್ಗಾವಲು ಗೋಪುರ/ಪೊಲೀಸ್ ವಾಚಿಂಗ್ ಟವರ್ ಹಲವು ವರ್ಷಗಳಿಂದ ಉಪಯೋಗಿಸದೇ ಧೂಳು ತಿನ್ನುತ್ತಿದೆ.
ಗದಗ ಜಿಲ್ಲೆಯಲ್ಲಿಯೇ ಶೈಕ್ಷಣಿಕ, ಧಾರ್ಮಿಕ, ಔದ್ಯೋಗಿಕವಾಗಿ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಲಕ್ಷ್ಮೇಶ್ವರ ಪಟ್ಟಣದಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಲಕ್ಷ್ಮೇಶ್ವರ ಪಟ್ಟಣ ನೆರೆಯ ಕುಂದಗೋಳ, ಶಿರಹಟ್ಟಿ, ಗದಗ, ಸವಣೂರ, ಶಿಗ್ಗಾಂವ, ಹಾವೇರಿ ತಾಲೂಕಿನ ಜನರಿಗೆ ಕೇಂದ್ರ ಸ್ಥಳವಾಗಿದ್ದರಿಂದ ವ್ಯಾಪಾರ, ಉದ್ಯೋಗ, ಶಿಕ್ಷಣ ಹೀಗೆ ಅನೇಕ ಕಾರಣಗಳಿಗಾಗಿ ಪಟ್ಟಣಕ್ಕೆ ಆಗಮಿಸುತ್ತಾರೆ. ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯೂ ಪಟ್ಟಣದಲ್ಲಿಯೇ ಹಾದು ಹೋಗಿದ್ದರಿಂದ ವಾಹನ ದಟ್ಟಣೆಯೂ ಹೆಚ್ಚಿರುತ್ತದೆ. ಅಲ್ಲದೇ ಮರಳು, ಮಣ್ಣು, ಎಂಸ್ಯಾಂಡ್, ಖಡಿ ಸಾಗಿಸುವ ವಾಹನಗಳು ಸಾಲುಗಟ್ಟಿರುತ್ತವೆ. ಇಂಜಿನಿಯರಿಂಗ್, ಪದವಿ, ಡಿಪ್ಲೋಮಾ, ಐಟಿಐ ಸೇರಿ ಕಾಲೇಜುಗಳು, ಹತ್ತಾರು ಶಾಲೆಗಳ ವಿದ್ಯಾರ್ಥಿಗಳು ಬರುತ್ತಾರೆ. ಬೆಳಿಗ್ಗೆಯಿಂದ ರಾತ್ರಿವರೆಗೂ ಮುಖ್ಯ ರಸ್ತೆಗಳು, ಮಾರುಕಟ್ಟೆ ರಸ್ತೆಗಳು ಜನ-ವಾಹನ ದಟ್ಟಣೆಯಿಂದ ಕೂಡಿರುತ್ತವೆ.
ಈ ನಿಟ್ಟಿನಲ್ಲಿ ಸಂಚಾರ ದಟ್ಟಣೆಯ ಜೊತೆಗೆ ಅಪಘಾತ, ಕಳ್ಳತನ, ಅಕ್ರಮ ಸಾಗಾಟ, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವ ಮತ್ತು ನಿಗಾ ವಹಿಸುವ ನಿಟ್ಟಿನಲ್ಲಿ ಈ ಹಿಂದೆ ಲಕ್ಷ್ಮೇಶ್ವರ ಠಾಣೆಯ ಪಿಎಸ್ಐ ಆಗಿದ್ದ ರವಿಚಂದ್ರ ಬಡಫಕ್ಕೀರಪ್ಪನವರ ಸಾರ್ವಜನಿಕರ ಸಹಕಾರದಿಂದ ಲಕ್ಷಾಂತರ ರೂ ಖರ್ಚು ಮಾಡಿ ಟ್ರಾಫಿಕ್ ಸಮಸ್ಯೆ ಇರುವ ಪಟ್ಟಣದ ಶಿಗ್ಲಿ ನಾಕಾ ಮತ್ತು ದೂದಪೀರಾಂ ದರ್ಗಾದಲ್ಲಿ ಪೊಲೀಸ್ ಕಣ್ಗಾವಲು ಗೋಪುರಗಳ ವ್ಯವಸ್ಥೆ ಮಾಡಿದ್ದರು. ಇದರಲ್ಲಿ ಸಿಸಿ ಕ್ಯಾಮರಾ, ಧ್ವನಿವರ್ಧಕ, ಫ್ಯಾನ್, ಕುರ್ಚಿ ಸೇರಿ ಟ್ರಾಫಿಕ್ ಪೊಲೀಸರಿಗೆ ಅಗತ್ಯವಾಗಿದ್ದ ಎಲ್ಲ ವ್ಯವಸ್ಥೆ ಮಾಡಿದ್ದರು. ಸರದಿಯಂತೆ ಸಿಬ್ಬಂದಿ ನೇಮಿಸಿ ದಿನವೂ ಅತ್ಯಂತ ವ್ಯವಸ್ಥಿತವಾಗಿ ಸಂಚಾರ ದಟ್ಟಣೆ ನಿಯಂತ್ರಿಸಲಾಗುತ್ತಿತ್ತು. ಅಲ್ಲದೇ ಸವಾರರಿಗೆ ರಸ್ತೆ ನಿಯಮಗಳನ್ನು ತಿಳಿಸಿ ಜಾಗೃತಿ ಮೂಡಿಸುವ ಮತ್ತು ದಂಡ ವಿಧಿಸುವ ಕಾರ್ಯ ಮಾಡಲಾಗುತ್ತಿತ್ತು.
ಆದರೆ ಠಾಣೆಯ ಪಿಎಸ್ಐ ವರ್ಗಾವಣೆಗೊಂಡ ನಂತರ ಈ ಪೊಲೀಸ್ ಕಣ್ಗಾವಲು ಗೋಪುರಗಳು ನಿಷ್ಕ್ರಿಯಗೊಂಡವು. ಶಿಗ್ಲಿ ನಾಕಾದಲ್ಲಿದ್ದ ಟಾವರ್ ಹೊಸ ಬಸ್ ನಿಲ್ದಾಣದ ಶೌಚಾಲಯದ ಹತ್ತಿರ ಬಿಸಾಡಲಾಗಿತ್ತು. ಇತ್ತೀಚೆಗಷ್ಟೇ ಶಿಗ್ಲಿ ನಾಕಾದಲ್ಲಿ ರೈತರು ಸೇರಿ ವಿವಿಧ ಸಂಘಟನೆಯವರು ಅನಿರ್ದಿಷ್ಟಾವಧಿ ಪ್ರತಿಭಟನೆ, ಹೋರಾಟ ಮಾಡುತ್ತಿರುವುದನ್ನು ತಪ್ಪಿಸುವ ಉದ್ದೇಶದಿಂದ ಎಲ್ಲೋ ಧೂಳು ತಿನ್ನುತ್ತಾ ಬಿದ್ದಿದ್ದ ಗೋಪುರವನ್ನು ತಂದು ನಿಲ್ಲಿಸಲಾಗಿದೆ. ಬದಲಾಗಿ ಟ್ರಾಫಿಕ್ ನಿಯಂತ್ರಣದ ಉದ್ದೇಶಕ್ಕಲ್ಲ ಎಂಬುದು ವಿಷಾದದ ಸಂಗತಿ. ಇನ್ನಾದರೂ ಅತ್ಯಂತ ಅಗತ್ಯವಿರುವ ಈ ಪೊಲೀಸ್ ಕಣ್ಗಾವಲು ಗೋಪುರ ಮತ್ತೆ ಕಾರ್ಯ ನಿರ್ವಹಿಸುವಂತಾಗಬೇಕು. ಟ್ರಾಫಿಕ್ ಸಮಸ್ಯೆ, ಓವರ್ ಲೋಡ್ ಸಾಗಾಣಿಕೆ, ಅಪಘಾತ ತಡೆಗಟ್ಟುವ ಕ್ರಮಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಿಪಿಐ, ಪಿಎಸ್ಐ ತುರ್ತು ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಈ ಕುರಿತು ಸಿಪಿಐ ಬಿ.ವಿ. ನ್ಯಾಮಗೌಡ ಅವರನ್ನು ಸಂಪರ್ಕಿಸಲಾಗಿ, ಸಿಬ್ಬಂದಿಗಳ ಕೊರತೆಯಿಂದ ಪೊಲೀಸ್ ಕಣ್ಗಾವಲು ಗೋಪುರಗಳನ್ನು ಬಳಸಲಾಗಿಲ್ಲ. ಈ ಬಗ್ಗೆ ಚರ್ಚಿಸಿ ಗೋಪುರ ದುರಸ್ತಿ ಮಾಡಿಸಿ ಬಣ್ಣ ಹಚ್ಚಿ, ಸಿಬ್ಬಂದಿ ನೇಮಿಸಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.



