ವಿಜಯಸಾಕ್ಷಿ ಸುದ್ದಿ, ಡಂಬಳ: ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿಂಗಟಾಲೂರ ಯೋಜನೆಯ ಮೂಲಕ ಡಂಬಳ, ತಾಮ್ರುಗುಂಡಿ, ಪೇಠಾ ಆಲೂರ, ಬಸಾಪೂರ, ಜಂತ್ಲಿ ಶಿರೂರ ಕೆರೆ ಭರ್ತಿಗೊಳಿಸಿದ ಹಿನ್ನೆಲೆಯಲ್ಲಿ ತೋಟಗಾರಿಕಾ ಮತ್ತು ಕೃಷಿ ಬೆಳೆಗಳನ್ನು ಬೆಳೆದು ಈ ಭಾಗದ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿತ್ತು. ಇದಕ್ಕೆ ಇಂಬು ನೀಡುವಂತೆ ಈ ಬಾರಿಯ ಬಜೆಟ್‌ನಲ್ಲಿ ತೋಟಗಾರಿಕಾ ಕಾಲೇಜು ಘೋಷಣೆಯಾಗಿರುವದರಿಂದ ಈ ಭಾಗದ ರೈತರ ಕನಸುಗಳು ಗರಿಗೆದರಿವೆ. ತೋಂಟಗಾರಿಕಾ ಬೆಳೆಗಳನ್ನು ಬೆಳೆಯಲು, ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಅನೂಕೂಲತೆ ಕಲ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಕೆ. ಪಾಟೀಲ್ ಮತ್ತು ಈ ಭಾಗದ ಶಾಸಕ ಜಿ.ಎಸ್. ಪಾಟೀಲರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಮುಂಡರಗಿ ಅಂದರೆ ಬರ, ಗುಳೇ ಹೋಗುವುದು, ಮಳೆಯ ಅನಿಶ್ಚಿತತೆ, ರೈತ ಆತ್ಮಹತ್ಯೆ ಇಂತಹ ಪರಿಸ್ಥಿತಿ ಮೊದಲಿನಿಂದಲೂ ಇತ್ತು. ಸಿಂಗಟಾಲೂರ ಯೋಜನೆ ಜಾರಿಗೆ ಬಂದಿದ್ದೇ ತಡ, ರೈತರು, ಕಾರ್ಮಿಕರಲ್ಲಿ ಹೊಸ ಹೊಸ ಕನಸುಗಳ ಮೂಡಿ ಗುಳೇ ಹೋಗುವುದು ತಪ್ಪಿ ರೈತರು ಈರುಳ್ಳಿ, ಬಾಳೆ, ಡ್ರ್ಯಾಗನ್, ದಾಳಿಂಬೆ, ಮಾವು, ಪೇರಲ್, ಬಾರೆ, ಲೀಚಿ, ಪಪಾಯಿ ಹಣ್ಣುಗಳನ್ನು ಕೆರೆ ಪ್ರದೇಶದ ಸುತ್ತಮುತ್ತ, ನೀರಾವರಿ ಕಾಲುವೆ ಹತ್ತಿರ ವಿರುವ ರೈತರು ಬೆಳೆದು ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಡಾವಣಗೇರಿ ಸೇರಿದಂತೆ ಹೊರ ರಾಜ್ಯಗಳಿಗೆ ಮಾರಾಟ ಮಾಡಿ ಆರ್ಥಿಕವಾಗಿ ಸಬಲರಾಗಿರುವುದು ಒಂದು ಇತಿಹಾಸ. ಇದಕ್ಕೆ ಕಾರಣೀಕರ್ತರು ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವ ಎಚ್.ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲರೇ ಆಗಿದ್ದಾರೆ ಎಂಬ ಸಂತಸ ರೈತ ವಲಯದ್ದು.
ಈ ಭಾಗಕ್ಕೆ ಸಿಂಗಟಾಲೂರ ಏತ ನೀರಾವರಿ ಬಂದ ಬಳಿಕ ಇಲ್ಲಿಯ ಭೂಮಿಯ ಬೆಲೆ ಬಂಗಾರವಾಗಿದೆ. ಇದಕ್ಕೆ ಇಂಬು ನೀಡುವಂತೆ ಮತ್ತೆ ರೈತರಲ್ಲಿ ಬಲ ತುಂಬಬೇಕು ಎಂಬ ಸದುದ್ದೇಶದಿಂದ ಶಾಸಕ ಜಿ.ಎಸ್. ಪಾಟೀಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ರೈತರ ಕನಸುಗಳಿಗೆ ಬೆನ್ನೆಲುಬಾಗಿ ನಿಲ್ಲುವ ಕೆಲಸವನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಡಂಬಳ ಭಾಗದಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ, ಶಾಸಕ ಜಿ.ಎಸ್. ಪಾಟೀಲರ ಪ್ರಯತ್ನದಿಂದ ಈ ಭಾಗದ ರೈತರಲ್ಲಿ ಹರುಷದ ಹೊನಲು ತುಂಬಿದೆ.
ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಆಶಯದಂತೆ ಡಂಬಳ ಹೋಬಳಿಯ ಗ್ರಾಮಸ್ಥರು ತೋಟಗಾರಿಕಾ ಬೆಳೆಗೆ ಹೆಚ್ಚು ಉತ್ತೇಜನ ಕೊಟ್ಟಿರುವ ಪ್ರದೇಶವಾಗಿದೆ. ಈ ಭಾಗದಲ್ಲಿ ತೋಟಗಾರಿಕಾ ಕಾಲೇಜು ಪ್ರಾರಂಭವಾದರೆ ಈ ಭಾಗದ ವಿದ್ಯಾರ್ಥಿಗಳ ಭವಿಷ್ಯ ಮತ್ತು ರೈತರ, ಯುವ ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಒಳ್ಳೆದಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದ್ದೇವೆ. ಹಾಗಾಗಿ ಅದರ ಸಂಪೂರ್ಣ ವರದಿಯನ್ನು ತರಿಸಿಕೊಂಡಿದ್ದು, ಇದೇ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲು ಶ್ರಮಿಸಲಾಗುವುದು.
–ಜಿ.ಎಸ್. ಪಾಟೀಲ.
ಶಾಸಕರು, ರೋಣ ಮತಕ್ಷೇತ್ರ.
ಶಾಸಕ ಜಿ.ಎಸ್. ಪಾಟೀಲರು ತೋಟಗಾರಿಕಾ ಕಾಲೇಜು ಯೋಜನೆಯ ರೂವಾರಿಗಳಾಗಿದ್ದಾರೆ. ಅವರು ರೈತಾಪಿ ಕುಟುಂಬದಲ್ಲಿ ಹುಟ್ಟಿದ್ದರಿಂದ ರೈತರ ಕಷ್ಟ ಕಾರ್ಪಣ್ಯಗಳನ್ನು ಅರಿತಿದ್ದಾರೆ. ರೈತರ ಕಷ್ಟಗಳಿಗೆ ನೆರವಾಗಿ ಸಹಾಯ-ಸಹಕಾರ ನೀಡಬೇಕೆಂಬುದು ಅವರ ಇಚ್ಛೆಯಾಗಿತ್ತು. ಅವರು ತೋಟಗಾರಿಕಾ ವಿಶ್ವವಿದ್ಯಾಲಯದಂತಹ ಬೃಹತ್ ಯೋಜನೆಯನ್ನು ಜಾರಿಗೆ ತಂದ ಧೀಮಂತ ನಾಯಕರು.
– ಅಬ್ದುಲ್‌ಸಾಬ ಕಲಕೇರಿ.
ಸಮಾಜ ಸೇವಕರು, ಹಿರೇವಡ್ಡಟ್ಟಿ.
ಕೆಲ ರಾಜಕೀಯ ವ್ಯಕ್ತಿಗಳು ಕೇವಲ ರಾಜಕೀಯಕ್ಕಾಗಿ, ತಮ್ಮ ಆರ್ಥಿಕ ಭದ್ರತೆಗಾಗಿ ರಾಜಕೀಯ ಮಾಡುತ್ತಾರೆ. ಆದರೆ, ಶಾಸಕ ಜಿ.ಎಸ್. ಪಾಟೀಲರು ರಾಜಕೀಯ ಮರೆತು ರೈತರ ಶ್ರೇಯಸ್ಸು, ರೈತರ ಅಭಿವೃದ್ಧಿಗಾಗಿ, ರಾಜಕೀಯ ರಹಿತ ಲಾಭಕ್ಕಾಗಿ ಈ ಯೋಜನೆ ತರಲು ಶ್ರಮಿಸಿದ್ದಾರೆ. ಎಲ್ಲರಿಗೂ ಶಕ್ತಿ ನೀಡುವ ತೋಟಗಾರಿಕಾ ಕಾಲೇಜು ಸ್ಥಾಪನೆಗೆ ಶ್ರಮಿಸಿರುವುದು ಅವರ ಹೃದಯವಂತಿಕೆಗೆ ಸಾಕ್ಷಿಯಾಗಿದೆ.
– ಗೋಣಿಬಸಪ್ಪ ಕೊರ್ಲಹಳ್ಳಿ.
ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತರು.