ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ತರಕಾರಿ ಬೇಕೇನ್ರೀ… ಎಳೇ ಸವತೆಕಾಯಿ, ಬೀನ್ಸ್, ಹಿರೇಕಾಯಿ, ಮೆಣಸಿನಕಾಯಿ, ಬದನೆಕಾಯಿ… ರರೀ.. ಕರೀ.. ಹಾ! ಬಿಸ್ಸಿ ಬಿಸಿ ಮಿರ್ಚಿ, ಖಾರಾ-ಮಂಡಕ್ಕಿ ಬೇಕೇನ್ರೀ…ಲಗೂ ಲಗೂ ಬರೋ ಬರೀ…ಎಲ್ಲಾ ಖಾಲೀ… ಕೂಗು ಕೇಳಿ ಯಾವುದೋ ಮಾರುಕಟ್ಟೆಯ, ವಾರದ ಸಂತೆಯ ಚಿತ್ರಣ ಎಂದುಕೊಳ್ಳಬೇಡಿ. ಬದಲಾಗಿ, ಪಟ್ಟಣದ ದಿ ಪಿನಿಕ್ಸ್ ಇಂಟರ್‌ನ್ಯಾಶನಲ್ ಶಾಲೆಯ ಆವರಣದಲ್ಲಿ ಮಕ್ಕಳಿಂದ ಕೇಳಿಬರುತ್ತಿದ್ದ ಮಾತುಗಳಿವು.
ಬುದವಾರ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರದ ಸಂತೆ ಕಾರ್ಯಕ್ರಮದ ನಿಮಿತ್ತ ಶಾಲೆಯ ಆವರಣ ಅಕ್ಷರಶಃ ಸಂತೆಯ ಗದ್ದಲದಂತೆಯೇ ಮಾರ್ಪಟ್ಟಿತ್ತು. ಕಾಯಿಪಲ್ಲೆ ಜತೆಗೆ, ಐಸ್‌ಕ್ರೀಮ್, ಮಜ್ಜಗಿ, ಸೀರೇಗಳು, ಪಾನಿಪುರಿ, ಹೊಳಿಗೆ ಊಟದ ಖಾನಾವಳಿ, ಸ್ಟೇಷನರಿ ಸೇರಿದಂತೆ ನಾನಾ ತರಹದ ತಿಂಡಿ-ತಿನಿಸುಗಳು, ದಿನದ ಅಗತ್ಯದ ವಸ್ತುಗಳ ಮಾರುಕಟ್ಟೆಗಳಿದ್ದವು. ಈ ಶಾಲೆಯ ಮಕ್ಕಳೆಲ್ಲಾ ತರಕಾರಿ ಮಾರಾಟ ಮಾಡುವ ರೈತರಾಗಿದ್ದರು. ಪೋಷಕರು, ಹಾಗೂ ಶಾಲೆಯ ಅಕ್ಕಪಕ್ಕದ ನಿವಾಸಿಗಳು, ಶಾಲೆಯ ಶಿಕ್ಷಕರು, ಆಡಳಿತ ಮಂಡಳಿಯವರು ಗ್ರಾಹಕರಾಗಿದ್ದರು.
ಈ ಮಕ್ಕಳ ಸಂತೆ ಮೇಳವನ್ನು ಪಿನಿಕ್ಸ್ ಶಾಲೆಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು. ತರಕಾರಿ ಮಾರಾಟ ಮಾಡಿದ ಮಕ್ಕಳು ಗ್ರಾಹಕರ ಬಳಿ ಚಿಲ್ಲರೆಯನ್ನೂ ಬಿಡದೇ, ಹಣ ಪಡೆದು ವ್ಯಾಪಾರ-ವಹಿವಾಟು ನಡೆಸಿದ್ದು, ಪದೇ ಪದೇ ಕೂಗಿ ಕೂಗಿ ತಮ್ಮ ತಮ್ಮ ವಸ್ತುಗಳನ್ನು ಕೊಳ್ಳುವಂತೆ ಹೇಳುತ್ತಿರುವದು ಕಂಡು ಬಂದಿತು. ಕೆಲವು ಕಡೆ ಚಿಣ್ಣರು ಥೇಟ್ ರೈತರಂತೆ ವೇಷ ಧರಿಸಿ ಸಂತೆಯಲ್ಲಿ ಪಾಲ್ಗೊಂಡಿದ್ದರು. ಜನರು ಅಗತ್ಯವಾದ ತರಕಾರಿಗಳನ್ನು ಚೌಕಾಸಿ ಮಾಡಿ ಖರೀದಿ ಮಾಡಿದರು. ಚಿಲ್ಲರೆ ಇಲ್ಲದಿದ್ದರೆ ಫೋನ್ ಪೇ ಮಾಡಿ ಎಂದು ಸಹ ಮಕ್ಕಳು ಹೇಳುತ್ತಿದ್ದರು. ಮಾರುಕಟ್ಟೆಯಲ್ಲಿ ಹೇಗೆ ವ್ಯವಹರಿಸಬೇಕು, ನಿತ್ಯ ಸಂತೆಯಲ್ಲಿ ಸಿಗುವ ವಸ್ತುಗಳ ಮಾಹಿತಿಯ ಜೊತೆಗೆ ಆಗುವ ಲಾಭ-ನಷ್ಟವನ್ನು ತಿಳಿಸುವ ಕಾರ್ಯವನ್ನು ಈ ಸಂತೆಯಿAದ ಮಾಡಿರುವದು ಎಲ್ಲರ ಗಮನ ಸೆಳೆಯಿತು.
ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಕೊಟಗಿ, ನಿರ್ದೇಶಕರುಗಳಾದ ರಾಜಶೇಖರ ಹಾಲೆವಾಡಿಮಠ, ಶಿವಯೋಗಿ ಗಾಂಜಿ, ವಿಜಯಕುಮಾರ ಹತ್ತಿಕಾಳ, ಎಸ್.ಬಿ. ಕೊಣ್ಣೂರ, ಚಂದ್ರಶೇಖರ ಕಗ್ಗಲಗೌಡ್ರ, ಕಿರಣಕುಮಾರ ನಾಲವಾಡ, ಸೇರಿದಂತೆ ಮಹಿಳಾ ಸದಸ್ಯರು, ಶಿಕ್ಷಕಿಯರು ಸಿಬ್ಬಂದಿಗಳು ಪಾಲಕರು ಇದ್ದರು. ಮಕ್ಕಳಲ್ಲಿ ಈ ರೀತಿಯ ಚಟುವಟಿಕೆಗಳು ಹೆಚ್ಚು ಪ್ರಯೋಜನಕಾರಿಯಾಗಲಿದ್ದು, ವ್ಯಾಪಾರ ವಹಿವಾಟಿನ ಜೊತೆ ಜನರೊಂದಿಗೆ ವ್ಯವಹರಿಸುವ ಕಲೆಯನ್ನು ಮಕ್ಕಳು ತಿಳಿದುಕೊಳ್ಳಬಹುದಾಗಿದೆ. ಇದೊಂದು ಉತ್ತಮ, ಮಾದರಿ ಕಾರ್ಯಕ್ರಮವಾಗಿದೆ ಎಂದು ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂತೆ ಒಂದು ರೀತಿಯಲ್ಲಿ ಮಕ್ಕಳಲ್ಲಿ ಕುಶಲತೆ, ಸಂವಹನ ಕಲೆ, ಸಾಮಾಜಿಕ ಬದುಕಿನೊಂದಿಗೆ ಒಡನಾಟದ ಕೌಶಲ್ಯವನ್ನು ಕಲಿಸುವುದರೊಂದಿಗೆ, ಅವರಲ್ಲಿ ಸೃಜನಶೀಲತೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಮತ್ತು ತೂಕದ ಮಾಹಿತಿ, ಅಳತೆ ಸಾಧನಗಳು ಅಲ್ಲದೆ ವ್ಯಾಪಾರ ರೀತಿ ನೀತಿಗಳನ್ನು ತಿಳಿಸುವ ಯೋಜನೆಯಾಗಿದೆ
– ಸುನೀತಾ ಯರ್ಲಗಟ್ಟಿ.
ಮುಖ್ಯೋಪಾಧ್ಯಾಯೆ, ದಿ ಪಿನಿಕ್ಸ್ ಇಂಟರ್‌ನ್ಯಾಷನಲ್ ಶಾಲೆ.



