ರಾಯಚೂರು: ಸರ್ಕಾರದ ಗೃಹಲಕ್ಷ್ಮಿ ಯೋಜನೆ ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಬದಲಾವಣೆ ತರುತ್ತಿರುವ ಮತ್ತೊಂದು ಉದಾಹರಣೆ ರಾಯಚೂರಿನಲ್ಲಿ ಕಂಡುಬಂದಿದೆ. ಸಿಂಧನೂರು ತಾಲೂಕಿನ ಉಪ್ಪಲದೊಡ್ಡಿ ಗ್ರಾಮದ ಗೃಹಿಣಿ ಹನುಮಮ್ಮ ನಡುಲಮನಿ ಅವರು, ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದೊರೆಯುತ್ತಿದ್ದ 2,000 ರೂ. ಸಹಾಯಧನವನ್ನು ಸಂಗ್ರಹಿಸಿ ಫ್ರಿಡ್ಜ್ ಖರೀದಿಸಿದ್ದಾರೆ.
ಹನುಮಮ್ಮ ಗೃಹಲಕ್ಷ್ಮಿ ಯೋಜನೆಯಡಿ ಪಡೆದ 23 ಕಂತುಗಳ ಹಣವನ್ನು ಉಳಿಸಿಕೊಂಡು, ಸುಮಾರು 17 ಸಾವಿರ ರೂ. ವೆಚ್ಚದಲ್ಲಿ ಫ್ರಿಡ್ಜ್ ಖರೀದಿಸಿದ್ದಾರೆ. ಇದರ ಮೂಲಕ ಕುಟುಂಬದ ದಿನನಿತ್ಯದ ಅಗತ್ಯಗಳಿಗೆ ಅನುಕೂಲವಾಗಿದ್ದು, ಆಹಾರ ವಸ್ತುಗಳನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ಸಹಾಯವಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಹನುಮಮ್ಮ ನಡುಲಮನಿ, ಗೃಹಲಕ್ಷ್ಮಿ ಯೋಜನೆಯು ಮಹಿಳೆಯರನ್ನು ಆರ್ಥಿಕವಾಗಿ ಬಲಪಡಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಈ ಯೋಜನೆ ಜಾರಿಗೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.



