ವಿಜಯಸಾಕ್ಷಿ ಸುದ್ದಿ, ಗದಗ: ಶರಣರ ಪರಂಪರೆ ಸಮಾನತೆಯನ್ನು ನೀಡಿದೆ. ಯಾವುದೇ ಜಾತಿ-ಮತ, ಪಂಥ, ಧರ್ಮ, ಲಿಂಗ ಭೇದವಿಲ್ಲದೆ ಸರ್ವರ ಏಳಿಗೆಯನ್ನು ಬಯಸಿದ ಕಾಲ. 12ನೇ ಶತಮಾನದಲ್ಲಿ ಶರಣರಿಗೆ ಸಮಾನವಾದ ವ್ಯಕ್ತಿತ್ವವನ್ನು ಹಲವಾರು ಶಿವಶರಣೆಯರು ಸ್ತ್ರೀಯ ಗಟ್ಟಿತನದ ನಿಲುವನ್ನು ಸಾಬೀತುಪಡಿಸಿದ್ದಾರೆ. ಹಿಂದಿನಲ್ಲೂ ಕೂಡ ಮಹಿಳೆಯನ್ನು ದ್ವಿತೀಯ ದರ್ಜೆ ಎಂದು ನೋಡುತ್ತಾ ಬಂದ ಕಾಲಘಟ್ಟದಿಂದ ಇಂದು ಎಲೆಮರೆಕಾಯಿಯಂತೆ ಅದೆಷ್ಟೋ ಸಂಕೀರ್ಣತೆಗಳನ್ನು ಸ್ತ್ರೀ ತನ್ನಲ್ಲೇ ಒದಗಿಸಿಕೊಂಡಿರುವುದು ಕೂಡ ಅಷ್ಟೇ ಸತ್ಯ ಎಂದು ಮುಂಡರಗಿಯ ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ವೀಣಾ ಪಾಟೀಲ ಅಭಿಪ್ರಾಯಪಟ್ಟರು.
ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ ವತಿಯಿಂದ ವಿವೇಕಾನಂದ ನಗರದ ನಿರ್ಮಲಾ ಗುರುಲಿಂಗನಗೌಡ ಪಾಟೀಲರ ಅವರ ಮಹಾಮನೆಯಲ್ಲಿ ಹಮ್ಮಿಕೊಂಡಿದ್ದ ದಿ. ಗಿರೋಸಾ ಹಾಗೂ ಎಲ್ಲೂ ಬಾಯಿ ಬದಿ ಸಂಸ್ಮರಣ ದತ್ತಿ ಕಾರ್ಯಕ್ರಮದಲ್ಲಿ `ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆ’ ವಿಷಯದ ಕುರಿತು ವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಸುಧಾ ಹುಚ್ಚಣ್ಣವರ ಮಾತನಾಡಿ, ಶರಣ ಸಂಸ್ಕೃತಿ ಇಡೀ ಮನುಕುಲಕ್ಕೆ ಬೆಳಕಾಗಿದೆ. 12ನೇ ಶತಮಾನದ ಸ್ತ್ರೀ ಸಮಾನತೆಯನ್ನು ಇಂದು ಬೂದಿ ಮುಚ್ಚಿದ ಕೆಂಡದಂತೆ ಸ್ತ್ರೀ ಹಲವು ರೀತಿಯ ನಕಾರಾತ್ಮಕ ಸಂವೇದನೆಯನ್ನು ಅನುಭವಿಸುತ್ತಿದ್ದಾಳೆ. ಶರಣರ ಅನುಭಾವದ ನುಡಿಗಳನ್ನು ಇಂದು ಪ್ರತಿಯೊಬ್ಬರೂ ಜೀವನದಲ್ಲಿ ಅನ್ವಯಿಸಿಕೊಂಡಾಗ ಮಾತ್ರ ಸ್ತ್ರೀ ಸಮಾನತೆ ಸಾಧ್ಯ ಎಂದರು.
ದತ್ತಿದಾನಿಗಳಾದ ರತ್ನಾ ಬದಿ ಮಾತನಾಡುತ್ತಾ, ಕದಳಿ ಮಹಿಳಾ ವೇದಿಕೆಯಿಂದ ನಡೆಯುವ ಈ ದತ್ತಿ ಕಾರ್ಯಕ್ರಮವು ನಮ್ಮ ತಂದೆ-ತಾಯಿಗಳ ಪೂಜನೀಯ ಸ್ಮರಣೆಯಾಗಿದೆ. ಅವಕಾಶ ಕಲ್ಪಿಸಿಕೊಟ್ಟ ವೇದಿಕೆಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಸುಲೋಚನಾ ಐಹೊಳೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಬಿ. ಗೌಡರ್, ತಾಲೂಕಾ ಶ.ಸಾ.ಪ ಅಧ್ಯಕ್ಷ ಪ್ರಕಾಶ್ ಅಸುಂಡಿ ಆಗಮಿಸಿದ್ದರು. ಅಶೋಕ್ ಬರಗುಂಡಿ ವಚನ ವಿಶ್ಲೇಷಣೆ ಮಾಡಿದರು. ಡಾ. ಗಿರಿಜಾ ಹಸಬಿ ಸ್ವಾಗತಿಸಿದರು. ಗದಗ ಗ್ರಾಮೀಣ ಘಟಕದ ಶ.ಸಾ.ಪ ಅಧ್ಯಕ್ಷ ಎಸ್.ಎಂ. ಮರಿಗೌಡರ ನಿರೂಪಿಸಿದರು. ದತ್ತಿದಾನಿಗಳ ಪರಿಚಯವನ್ನು ನಿವೃತ್ತ ಉಪನ್ಯಾಸಕರಾದ ಶಕುಂತಲಾ ಸಿಂಧೂರಿ ನೆರವೇರಿಸಿದರು. ಪುಷ್ಪಾ ಭಂಡಾರಿ ಹಾಗೂ ವಾರದ ಸಂಗಡಿಗರು ವಚನ ಗಾಯನ ನೆರವೇರಿಸಿದರು. ಅನ್ನಪೂರ್ಣ ವರವಿ, ಶಾಂತಾ ಮುಂದಿನಮನಿ, ಗೌರಕ್ಕ ಬಡಿಗಣ್ಣವರ್, ಬೂದಪ್ಪ ಅಂಗಡಿ, ವಿ.ಕೆ. ಕರಿಗೌಡರ ಮುಂತಾದವರು ಉಪಸ್ಥಿತರಿದ್ದರು.
ಮಕ್ಕಳ ಸಾಹಿತಿ ಡಾ. ರಾಜೇಂದ್ರ ಗಡಾದ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಶರಣ ಸಂಸ್ಕೃತಿ ಪ್ರಸಾರ ಅವಶ್ಯವಾಗಿದೆ. ಕಾಲಘಟ್ಟದ ಬದಲಾವಣೆಗಳೊಂದಿಗೆ ಸ್ತ್ರೀ ಸಂವೇದನೆಯ ವಿಚಾರಗಳು ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಇಂತಹ ದತ್ತಿ ಕಾರ್ಯಕ್ರಮಗಳು ಹಿರಿಯರ ಸ್ಮರಣೆಗೆ ಮಹತ್ವವನ್ನು ಕಲ್ಪಿಸಿವೆ ಎಂದು ನುಡಿದರು.



