ವಿಜಯಸಾಕ್ಷಿ ಸುದ್ದಿ, ರೋಣ: ಸಾರಿಗೆ ವಾಹನಗಳನ್ನು ಪುರುಷರಷ್ಟೇ ಚಲಾಯಿಸುವ ಸಂಪ್ರದಾಯ ಕರಗುತ್ತಾ ಬಂದಿದೆ. ಇತ್ತೀಚೆಗೆ ಅಲ್ಲಲ್ಲಿ ಕೆಲವೇ ಕೆಲವು ಮಹಿಳೆಯರು ಬಸ್, ಲಾರಿ ಮೊದಲಾದ ಭಾರೀ ವಾಹನಗಳನ್ನು ವೃತ್ತಿಪರವಾಗಿ ಚಾಲನೆ ಮಾಡುವುದು ಕಂಡುಬರುತ್ತಿದೆ. ಹಾಗೆಯೇ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಮಹಿಳೆ ಮಂಜುಳಾ ಸ್ವಚ್ಛ ವಾಹಿನಿ ಚಾಲಕಿಯಾಗಿ ಕೆಲಸ ಮಾಡುತ್ತಾ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಸ್ವ-ಸಹಾಯ ಸಂಘದ ಮೂಲಕ ಚಾಲನಾ ತರಬೇತಿ ಪಡೆದು ಮಂಜುಳಾ ಯಲ್ಲಪ್ಪ ಮಾದರ ಸ್ವಚ್ಛ ವಾಹಿನಿ ಚಾಲಕಿಯಾಗಿ ಕಳೆದ 6 ತಿಂಗಳಿಂದ ಕೆಲಸ ಮಾಡುತ್ತಿದ್ದಾಳೆ. ಮಲ್ಲವ್ವ ಭರಮಪ್ಪ ಮಾದರ, ಶಿವವ್ವ ಈರಪ್ಪ ಮಾದರ, ರೇಣುಕಾ ಪ್ರಶಾಂತ ಮಾದರ ಇವರು ಕಸ ವಿಂಗಡನೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಮಹಿಳೆಯರೇ ಸ್ವಚ್ಛ ವಾಹಿನಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಗ್ರಾ.ಪಂ ವತಿಯಿಂದ ಮನೆ ಮನೆಗೆ ತೆರಳಿ ಕಸವನ್ನು ಸಂಗ್ರಹಿಸಿ, ಅವುಗಳನ್ನು ವಿಲೇವಾರಿ ಘಟಕದಲ್ಲಿ ವಿಂಗಡಿಸಿ, ವರ್ಷಾಂತ್ಯದಲ್ಲಿ ಅವುಗಳನ್ನು ಹರಾಜು ಹಾಕುವ ಮೂಲಕ ಆದಾಯ ಗಳಿಸುವ ಯೋಚನೆಯಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರು ತೊಡಗಿದ್ದಾರೆ. ಅಲ್ಲದೆ ಪ್ರತಿ ಮನೆಗೆ ತಿಂಗಳಿಗೆ 30 ರೂ ಮತ್ತು ಅಂಗಡಿಗಳಿಗೆ ರೂ. 100 ರೂ.ಗಳನ್ನು ಸಂಗ್ರಹಿಸಿ ಅದರಲ್ಲೇ ತಮ್ಮ ವೇತನ ಪಾವತಿ ಮಾಡಿಕೊಂಡು, ಉಳಿದ ಹಣವನ್ನು ಉಳಿತಾಯ ಮಾಡಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ಜಕ್ಕಲಿ ಗ್ರಾಮದ ಮಹಿಳೆಯರು ಸ್ವ-ಸಹಾಯ ಸಂಘದ ಮೂಲಕ ಗ್ರಾಮದ ಸ್ವಚ್ಛತೆ ಜೊತೆಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಿದೆ. ಇವರ ಕಾರ್ಯಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಸರ್ವ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು ಬೆಂಬಲವಾಗಿ ನಿಂತಿದ್ದಾರೆ.
ಜಕ್ಕಲಿ ಗ್ರಾಮ ಪಂಚಾಯಿತಿಗೆ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರೋತ್ಸಾಹಿಸಿದ್ದಾರೆ. ಅಲ್ಲದೆ ಶೇಂಗಾ ಎಣ್ಣೆ, ಕುಸುಬೆ ಎಣ್ಣೆ ಗಾಣದ ಮೂಲಕ ಸಹ ಸ್ವ-ಸಹಾಯ ಸಂಘದ ಮಹಿಳೆಯರು ಆದಾಯ ಗಳಿಸುತ್ತಿರುವ ಬಗ್ಗೆ ಕಾರ್ಯ ನಿರ್ವಾಹಕ ಅಧಿಕಾರಿಗಳು ಪ್ರಶಂಸೆ ವ್ಯಕ್ತ ಪಡಿಸಿದರು. ಗ್ರಾಮದ ಕೆರೆಯಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಸ್ವ-ಸಹಾಯ ಸಂಘದವರನ್ನು ಪ್ರೋತ್ಸಾಹಿಸಲು ಗ್ರಾ.ಪಂ ವತಿಯಿಂದ ಯೋಜನೆ ರೂಪಿಸಲಾಗುತ್ತಿದೆ. ಗ್ರಾಮದ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಗ್ರಾ.ಪಂ ಜೊತೆಗೂಡಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲು ತಾಲೂಕು ಪಂಚಾಯಿತಿಯೂ ಹಲವು ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದರು.
ಜಕ್ಕಲಿ ಗ್ರಾಮದಲ್ಲಿ ಜನ ಪ್ರತಿನಿಧಿಗಳು, ಸಾರ್ವಜನಿಕರ ಸಹಕಾರದಿಂದ ಗ್ರಾಮದ ಸ್ವಚ್ಛತೆಯ ಜೊತೆಗೆ ಸ್ವ-ಸಹಾಯ ಸಂಘಗಳು ಸಬಲೀಕರಣಗೊಳ್ಳುತ್ತಿವೆ. ಮೇಲಧಿಕಾರಿಗಳ ಸಲಹೆ-ಮಾರ್ಗದರ್ಶನದ ಮೂಲಕ ಇದು ಸಾಧ್ಯವಾಗಿದೆ.
– ಶಿವಯೋಗಿ ರಿತ್ತಿ.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ, ಜಕ್ಕಲಿ.
“ಸ್ವ-ಸಹಾಯ ಸಂಘದ ಮೂಲಕ ಡ್ರೈವಿಂಗ್ ತರಬೇತಿ ಪಡೆದುಕೊಂಡು ಕಳೆದ 6 ತಿಂಗಳಿಂದ
ಕೆಲಸ ಮಾಡುತ್ತಿದ್ದೇನೆ. ಪ್ರತಿದಿನ ಮುಂಜಾನೆ ಕಸ ಸಂಗ್ರಹಿಸಿ ಗ್ರಾಮವನ್ನು ಸ್ವಚ್ಛಗೊಳಿಸುವಲ್ಲಿ ಖುಷಿ ಇದೆ. ಇದರಿಂದ ಸ್ವಂತ ದುಡಿಮೆ ಮತ್ತು ಆದಾಯ ಗಳಿಸುವ ಖುಷಿ ಇದೆ”
– ಮಂಜುಳಾ ಯಲ್ಲಪ್ಪ ಮಾದರ.
ಸ್ವಚ್ಛ ವಾಹಿನಿ ಚಾಲಕಿ.
**ಕೋಟ್**
ತಾಲೂಕಿನ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಈಗಾಗಲೇ ಚಾಲನಾ ತರಬೇತಿ ಕೊಡಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಗ್ರಾ.ಪಂಗಳಲ್ಲಿ ಮಹಿಳೆಯರು ಸ್ವಚ್ಛ ವಾಹಿನಿಗಳನ್ನು ನಿರ್ವಹಿಸಲಿದ್ದಾರೆ.
– ಚಂದ್ರಶೇಖರ ಕಂದಕೂರ.
ಕಾರ್ಯ ನಿರ್ವಾಹಕ ಅಧಿಕಾರಿಗಳು,
ತಾ.ಪಂ ರೋಣ.