ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಯಶಸ್ವಿ ಪುರುಷನ ಹಿಂದೆ ಮಹಿಳೆಯ ಶ್ರಮ ಅಡಗಿರುತ್ತದೆ.
ಮಹಿಳೆಯರಿಗೆ ಅವಕಾಶಗಳು ದೊರೆತಲ್ಲಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಾರೆ. ಮಹಿಳೆಯರಲ್ಲಿ ಸಮಾಜದ ಚಿಂತನೆ ಅಡಗಿರುತ್ತದೆ ಎಂದು ಹಾಸ್ಯ ಸಾಹಿತಿ ಅರುಣ ಕುಲಕರ್ಣಿ ಹೇಳಿದರು.
ಅವರು ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಪಟ್ಟಣದ ಸೃಷ್ಟಿ, ದೃಷ್ಟಿ ಪರಿವಾರ ಹಾಗೂ ಈಶ್ವರೀಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗುರುವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುವ ಅನೇಕ ಘಟನೆಗಳು ಹಾಸ್ಯವನ್ನು ಹುಟ್ಟು ಹಾಕುತ್ತವೆ.
ಮತ್ತೊಬ್ಬರ ಜೀವನದ ಜೊತೆ ಟೀಕೆ ಮಾಡುವಂತೆ, ನೋವು ನೀಡುವಂತೆ ಹಾಸ್ಯ ಮಾಡುವದು ಅಪಹಾಸ್ಯವಾಗುತ್ತದೆ ಎಂದರು.
ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕಿ ಲಲಿತಕ್ಕ ಕೆರಿಮನಿ ಮಾತನಾಡಿ, ಸ್ತ್ರೀಯನ್ನು ಅಗೌರವಿಸುವದು ನಮ್ಮ ಸಂಸ್ಕೃತಿಯಲ್ಲ. ದೇವತಾ ಶಕ್ತಿ ಅಡಗಿಸಿಕೊಂಡಿರುವ ಮಹಿಳೆಯನ್ನು ಗೌರವದಿಂದ ನೋಡಿಕೊಳ್ಳುವದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂದು ಮಹಿಳೆಯರು ಪ್ರತಿಯೊಂದು ರಂಗದಲ್ಲೂ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಹೆಚ್ಚಿನ ಅವಕಾಶಗಳನ್ನು ನೀಡಿದರೆ ಸ್ತ್ರೀಶಕ್ತಿಗೆ ಮತ್ತಷ್ಟು ಬಲ ನೀಡಿದಂತಾಗುತ್ತದೆ. ಹೆಣ್ಣು ಈ ಜಗತ್ತಿನ ಕಣ್ಣು. ಸಹನೆ, ಜಾಣ್ಮೆ, ಚಾಣಾಕ್ಷತನ, ಕರುಣೆ, ವಾತ್ಸಲ್ಯ ಎಲ್ಲವನ್ನು ಹೊಂದಿರುವಳು ಹೆಣ್ಣು ಮಾತ್ರ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಬಿ.ಕೆ. ನಾಗಲಾಂಬಿಕಾ ವಹಿಸಿದ್ದರು. ಹಿರಿಯರಾದ ಸುವರ್ಣಾಬಾಯಿ ಬಹದ್ದೂರದೇಸಾಯಿ, ರೋಹಿಣಿಬಾಯಿ ಬಹದ್ದೂರದೇಸಾಯಿ, ಸರಸ್ವತಿ ಅಗಡಿ, ಶಾರದಾ ಮಹಾಂತಶೆಟ್ಟರ, ಮಂಜುಳಾ ಸತ್ಯಪ್ಪನವರ, ಕಾವ್ಯಾ ದೇಸಾಯಿ, ಮುಂತಾದವರಿದ್ದರು. ಬಿ.ಎಸ್. ಬಾಳೇಶ್ವರಮಠ ಸ್ವಾಗತಿಸಿದರು, ಜಯಶ್ರೀ ಮೆಳ್ಳಿಗೇರಿ, ಶೈಲಾ ಆದಿ ನಿರೂಪಿಸಿದರು.
ಪರಿವಾರದ ಸಂಸ್ಥಾಪಕ ಅಧ್ಯಕ್ಷೆ ಸರೋಜಾ ಬನ್ನೂರ ಮಾತನಾಡಿ, ಎಲ್ಲವನ್ನು ಸಾಧಿಸುವ ಶಕ್ತಿಯನ್ನು ಮಹಿಳೆ ಪಡೆದಿದ್ದಾಳೆ. ಅಂತಹ ಮಹಿಳೆಗೆ ಧೈರ್ಯ ತುಂಬಿ ಪ್ರೋತ್ಸಾಹ ನೀಡುವ ಕಾರ್ಯವನ್ನು ಸಮಾಜ ಮಾಡಬೇಕಾಗಿದೆ. ನಾವೆಲ್ಲರೂ ಇಲ್ಲಿ ಒಂದೇ ತಾಯಿಯ ಮಕ್ಕಳಿದ್ದಂತೆ. ಬಡವ, ಬಲ್ಲಿದ, ಮೇಲು-ಕೀಳು ಭಾವನೆ ಬೇಡ ಎಂದ ಅವರು, ಇಂದು ಪರಿವಾರದ ವತಿಯಿಂದ ಎಲೆಮರೆಯ ಕಾಯಿಯಂತೆ ಇರುವ ಸಣ್ಣ ಸಣ್ಣ ದುಡಿಮೆಯಿಂದ ಜೀವನ ಸಾಗಿಸುತ್ತಿರುವ ಅನೇಕ ಮಹಿಳೆಯರು ಈ ಸಮಾಜದಲ್ಲಿದ್ದು, ಅವರನ್ನು ಗೌರವಿಸುವ ಕಾರ್ಯವನ್ನು ಮಾಡಲಾಗಿದೆ ಎಂದರು.