ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಂತಡಪಿ ಗ್ರಾಮದ ಸಮೀಪದ ಪ್ರವಾಸಿ ತಾಣದಲ್ಲಿ ಈಜುಕೊಳಕ್ಕೆ ಧುಮುಕಿದ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ನಡೆದಿದೆ.
ಕುಂದಲಗುರ್ಕಿ ಗ್ರಾಮದ ರೇಖಾ (37) ಮೃತ ಮಹಿಳೆ. ಅವರು ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಂಸ್ಥೆಯ ವತಿಯಿಂದ ಚಿಂತಡಪಿ ಗ್ರಾಮದ ಪ್ರವಾಸಿ ತಾಣದಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರೇಖಾ ಅವರು ಸಂಜೆ ಆರು ಗಂಟೆಯ ನಂತರ ಈಜುಕೊಳದಲ್ಲಿ ಈಜಲು ಧುಮುಕಿದ್ದಾರೆ.
ಈಜು ಬರುವವರಾಗಿದ್ದರೂ ದುರದೃಷ್ಟವಶಾತ್ ರೇಖಾ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಅವರು ಈಜಾಡುತ್ತಿದ್ದಾರೆ ಎಂದು ಸಹೋದ್ಯೋಗಿಗಳು ಭಾವಿಸಿದ್ದರು. ಆದರೆ ಕೆಲ ನಿಮಿಷಗಳಾದರೂ ಮೇಲಕ್ಕೆ ಬರದಿದ್ದರಿಂದ ಅನುಮಾನಗೊಂಡವರು ಅವರನ್ನು ನೀರಿನಿಂದ ಹೊರತೆಗೆದಿದ್ದಾರೆ. ತಕ್ಷಣ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಆಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಅಗತ್ಯ ಸುರಕ್ಷತಾ ವ್ಯವಸ್ಥೆ ಒದಗಿಸದೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಪ್ರವಾಸಿ ತಾಣದ ಮಾಲೀಕರು ಹಾಗೂ ರೇಖಾರನ್ನು ಕರೆದುಕೊಂಡು ಬಂದ ಸಂಸ್ಥೆಯ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ದುರ್ಘಟನೆಯಿಂದ ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸ್ಥಳದಲ್ಲಿದ್ದ ಭದ್ರತಾ ಕ್ಯಾಮೆರಾದಲ್ಲಿ ಸಂಪೂರ್ಣ ದೃಶ್ಯ ದಾಖಲಾಗಿರುವುದಾಗಿ ತಿಳಿದುಬಂದಿದೆ.



