ಹಾಸನ: ಮದುವೆಗೆಂದು ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ಪ್ರಿಯಾಂಕಾ ಪತ್ತೆಯಾಗಿದ್ದು, ಪ್ರಕರಣದಲ್ಲಿ ಅನೈತಿಕ ಸಂಬಂಧ ಶಂಕೆ ವ್ಯಕ್ತವಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ನಡೆಸಿದ ತನಿಖೆಯಲ್ಲಿ, ಕುಣಿಗಲ್ನ ಗೊಟ್ಟಿಕೆರೆ ಪ್ರದೇಶದಲ್ಲಿ ಡೇವಿಡ್ ಎಂಬಾತನ ಮನೆಯಲ್ಲಿ ಪ್ರಿಯಾಂಕಾ ಇದ್ದುದು ಪತ್ತೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬೇಲೂರು ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.
ಡೇವಿಡ್ ಮನೆಯಲ್ಲೇ ಪ್ರಿಯಾಂಕಾ ಕಳೆದ ಎರಡು ದಿನಗಳಿಂದ ವಾಸವಿದ್ದಳು ಎನ್ನಲಾಗಿದೆ.
ಈ ಪ್ರಕರಣವು ಬೇಲೂರು ಪೊಲೀಸರಿಗೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು. ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಂತೆ ಸೀನ್ ಕ್ರಿಯೇಟ್ ಮಾಡಿ ಪ್ರಿಯಾಂಕಾ ನಾಪತ್ತೆಯಾಗಿದ್ದ ಹಿನ್ನೆಲೆ ತನಿಖೆ ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಪೊಲೀಸರ ಸತತ ಪ್ರಯತ್ನದ ಫಲವಾಗಿ, ಪತಿಯ ಸ್ನೇಹಿತನಾಗಿರುವ ಡೇವಿಡ್ ಮನೆಯಲ್ಲಿ ಕೊನೆಗೂ ಮಹಿಳೆ ಪತ್ತೆಯಾಗಿದ್ದಾರೆ.
ತನಿಖೆಯ ವೇಳೆ ಡೇವಿಡ್ ಕುಣಿಗಲ್ ಪಟ್ಟಣದ ಗೊಟ್ಟಿಕೆರೆ ಪ್ರದೇಶದಲ್ಲಿ ವಾಸವಾಗಿದ್ದು, ಪಟ್ಟಣದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಾಹಿತಿ ಲಭ್ಯವಾಗಿದೆ. ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಪ್ರಿಯಾಂಕಾ, ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ಮದುವೆಗೆಂದು ಬಂದಿದ್ದಳು. ಫೆಬ್ರವರಿ 12ರ ರಾತ್ರಿ 8 ಗಂಟೆ ಸುಮಾರಿಗೆ ಹಾಸನ ಜಿಲ್ಲೆಯ ಬೇಲೂರು ಬಸ್ ನಿಲ್ದಾಣದ ಬಳಿ ಈಕೆ ನಿಗೂಢವಾಗಿ ನಾಪತ್ತೆಯಾಗಿದ್ದಳು. ನಾಪತ್ತೆಯಾಗುವ ಮುನ್ನ ಸಂಜೆ 7.30ರ ಸುಮಾರಿಗೆ ಕುಟುಂಬದವರಿಗೆ ಕರೆ ಮಾಡಿದ್ದ ಪ್ರಿಯಾಂಕಾ, ‘ಯಾರೋ ಒಬ್ಬರ ಜೊತೆ ಇದ್ದೇನೆ’ ಎಂದು ಹೇಳಿ ಕರೆ ಕಟ್ ಮಾಡಿದ್ದಳು. ಬಳಿಕ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಬೇಲೂರು ತಾಲೂಕಿನ ಕಲ್ಕೆರೆ ಸಮೀಪ ಮಹಿಳೆಯ ಒಳಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದು, ಪ್ರಕರಣದ ಮೇಲೆ ಮತ್ತಷ್ಟು ಅನುಮಾನ ಮೂಡಿಸಿತ್ತು.
ಪ್ರಸ್ತುತ ಪೊಲೀಸರು ಪ್ರಿಯಾಂಕಾಳನ್ನು ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ.



