HomeArt and Literature“ಜೀವ ಭಾವದ ಮಹಾಶಕ್ತಿ ಮಹಿಳೆ”

“ಜೀವ ಭಾವದ ಮಹಾಶಕ್ತಿ ಮಹಿಳೆ”

For Dai;y Updates Join Our whatsapp Group

Spread the love

ಸ್ತ್ರೀ ಎಂದರೆ ಅಷ್ಟೇ ಸಾಕೆ, ನಿನಗೆ ಬೇರೆ ಹೆಸರು ಬೇಕೆ ಎನ್ನುವ ಕವಿವಾಣಿಯು ಮಹಿಳೆಯ ಮಹತ್ವವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ. ನವಮಾಸ ಹೊತ್ತು ಹೆತ್ತು ಸಾಕಿ ಸಲಹುವ ತಾಯಿಯಾಗಿ, ಮನೆಯ ಪ್ರೀತಿ–ವಾತ್ಸಲ್ಯವನ್ನು ಬೆಳಗಿಸುವ ಮಗಳಾಗಿ, ಕಷ್ಟ–ಸುಖಗಳಲ್ಲಿ ಜೊತೆಗಿರುವ ಅರ್ಧಾಂಗಿಯಾಗಿ ಬದುಕಿನ ಎಲ್ಲ ಆಯಾಮಗಳಲ್ಲಿ ಮಹಿಳೆ ಮಹಾಶಕ್ತಿಯಾಗಿ ನಿಲ್ಲುತ್ತಾಳೆ. ಮನೆ, ಮನಸ್ಸು ಮತ್ತು ಸಮಾಜವನ್ನು ಬೆಸೆಯುವ ಜೀವನಾಡಿಯೇ ಮಹಿಳೆ.

ಈ ನಾಡಿನ ಮಹಾಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು ತಮ್ಮ ಜೀವನದಲ್ಲಿ ಪತ್ನಿಯ ಭಾವನಾತ್ಮಕ ಮಹತ್ವವನ್ನು ಕವನದ ಮೂಲಕ ವ್ಯಕ್ತಪಡಿಸಿದ್ದಾರೆ. ಇದು ಮಹಿಳೆಯ ಸ್ಥಾನವನ್ನು ಎತ್ತಿಹಿಡಿಯುವ ಉದಾಹರಣೆಯಾಗಿದೆ. ಪ್ರತಿಯೊಬ್ಬರ ಬದುಕಿನಲ್ಲಿ ಹೆಣ್ಣು ಒಂದು ಮಹಾಶಕ್ತಿಯೇ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಪ್ರತಿವರ್ಷ ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿದ್ದರೂ, ವಾಸ್ತವದಲ್ಲಿ ಮಹಿಳೆಯರು ಇನ್ನೂ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮಗಳಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ತಾಯಿಯಾಗಿ ಹಾಗೂ ಕುಟುಂಬದ ಅನೇಕ ಜವಾಬ್ದಾರಿಗಳನ್ನು ಹೊತ್ತು ಸಾಗುವ ಮಹಿಳೆ ಸಮಾಜದ ಶಕ್ತಿ. “ತೊಟ್ಟಿಲು ತೂಗುವ ಕೈ ದೇಶವನ್ನಾಳಬಲ್ಲದು” ಎನ್ನುವ ಮಾತು ಮಹಿಳೆಯ ಸಾಮರ್ಥ್ಯವನ್ನು ಸಾರುತ್ತದೆ.

ಒಂದು ಕಾಲದಲ್ಲಿ ಮಹಿಳೆಗೆ ಶಿಕ್ಷಣ ಮತ್ತು ಸಮಾನ ಹಕ್ಕುಗಳಿಲ್ಲದ ಪರಿಸ್ಥಿತಿ ಇತ್ತು. ಆದರೆ ಸಾವಿತ್ರಿಬಾಯಿ ಫುಲೆ ಅವರಂತಹ ಧೈರ್ಯಶಾಲಿ ಮಹಿಳೆಯರು ಮಹಿಳಾ ಶಿಕ್ಷಣದ ಬೆಳಕನ್ನು ಹರಿಸಿದರು. ನಂತರ ಮಹಿಳೆಯರು ಸಮಾನ ಹಕ್ಕುಗಳಿಗಾಗಿ ಹೋರಾಡಿದ ಪರಿಣಾಮವಾಗಿ ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನಕ್ಕೆ ಜಾಗತಿಕ ಮಾನ್ಯತೆ ದೊರೆಯಿತು.

ಇಂದು ಮಹಿಳೆಯರು ಶಿಕ್ಷಣ, ರಾಜಕೀಯ, ವಿಜ್ಞಾನ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಸಾಲುಮರದ ತಿಮ್ಮಕ್ಕ, ಕಲ್ಪನಾ ಚಾವ್ಲಾ, ಸುಧಾಮೂರ್ತಿ ಮುಂತಾದ ಅನೇಕ ಮಹಿಳೆಯರು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಮಹಿಳಾ ದಿನ ಕೇವಲ ಆಚರಣೆಯಾಗಿ ಉಳಿಯದೆ, ಮಹಿಳೆಯರಿಗೆ ಗೌರವ, ಸಮಾನತೆ ಮತ್ತು ಅವಕಾಶಗಳನ್ನು ನೀಡುವ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು. ಕುಟುಂಬ ಮತ್ತು ಸಮಾಜವನ್ನು ಸದೃಢಗೊಳಿಸುವ ಶಕ್ತಿ ಮಹಿಳೆಗೆ ಪ್ರಕೃತಿದತ್ತವಾಗಿದೆ. ಮಹಿಳೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ.

ಸುಧಾ ಹುಚ್ಚಣ್ಣವರ,
ಉಪನ್ಯಾಸಕರು ಹಾಗೂ ಲೇಖಕರು,
ಶಿರಹಟ್ಟಿ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!