ಚಿಕ್ಕಬಳ್ಳಾಪುರ:- ತಾಲೂಕಿನ ಪೇರೇಸಂದ್ರ ಗ್ರಾಮದ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಪ್ರೇಯಸಿಯು ತನ್ನ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ವಿದ್ಯಾರ್ಥಿಯೋರ್ವ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
26 ವರ್ಷದ ಮೊಹಮ್ಮದ್ ಶಬ್ಬೀರ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ಕೇರಳದ ವಯನಾಡು ಮೂಲದವ ಎನ್ನಲಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಆರ್‌ಸಿಟಿ ಎನ್ನುವ ಅಲೈಡ್ ಸೈನ್ಸ್ ಕೋರ್ಸ್‌ನ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇನ್ನೇನು ಕೆಲವೇ ತಿಂಗಳುಗಳಲ್ಲಿ ಕೋರ್ಸ್ ಮುಗಿಸಿ ಮನೆಗೆ ಮರಳಬೇಕಿದ್ದ ವಿದ್ಯಾರ್ಥಿ ಇಂದು ಬೆಳಗ್ಗೆ ಹಾಸ್ಟೆಲ್‌ನ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ರೂಮ್‌ನ ಕಿಟಕಿಗೆ ಟವೆಲ್ ಕಟ್ಟಿ, ಅದರಿಂದ ಕತ್ತು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದ ಪೇರೇಸಂದ್ರ ಠಾಣಾ ಪೊಲೀಸರು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ರೂಮ್ ಪರಿಶೀಲನೆ ನಡೆಸಿದಾಗ ಡೆತ್‌ನೋಟ್ ಸಿಕ್ಕಿದೆ.
ಕಳೆದ ಕೆಲವು ದಿನಗಳಿಂದ ಮೃತ ಶಬ್ಬೀರ್‌ನ ಪೋನ್ ನಂಬರ್‌ನ್ನು ಆ ಹುಡುಗಿ ಬ್ಲಾಕ್ ಮಾಡಿದ್ದಳಂತೆ. ಜೊತೆಗೆ ಸರಿಯಾಗಿ ರೆಸ್ಪಾನ್ಸ್ ಮಾಡಿರಲಿಲ್ಲವಂತೆ. ಹೀಗಾಗಿ ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಪೇರೇಸಂದ್ರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.