ಬೆಂಗಳೂರು: ಬೆಂಗಳೂರಿನ ಜೆ.ಸಿ. ನಗರದ ಮುಖ್ಯರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ವಿಜಯ್(22) ಕೊಲೆಯಾದ ವ್ಯಕ್ತಿ. ಘಟನೆ ಸಂಬಂಧ ಕಿರಣ್ ಮತ್ತು ವಿನೋದ್ ಎಂಬ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಶುಕ್ರವಾರ ರಾತ್ರಿ ಕುಡಿದು ಹೋಗುವಾಗ ವಿಜಯ್ ಬೈಕ್ಗೆ ವಿನೋದ್ ಗಾಡಿ ಟಚ್ ಆಗಿತ್ತು. ಇದೇ ವಿಚಾರವಾಗಿ ಗಲಾಟೆ ಕೂಡ ನಡೆದಿತ್ತು. ವಿಷಯವನ್ನು ಅಲ್ಲಿಗೆ ಬಿಡದೆ ಇಂದು ಬೆಳಗ್ಗೆ ವಿಜಯ್ ಹುಡುಕಿಕೊಂಡು ಆರೋಪಿಗಳಾದ ಕಿರಣ್ ಮತ್ತು ವಿನೋದ್ ಹೋಗಿದ್ದರು. ಮನೆ ಬಳಿ ತೆರಳಿದ್ದಾಗ ವಿಜಯ್ ಸಿಗದಿದ್ದರಿಂದ ಫೋನ್ ಮಾಡಿ ಆತನನ್ನು ಮತ್ತೆ ಬಾರ್ ಬಳಿಗೆ ಕರೆಸಿಕೊಂಡಿದ್ದರು.
ವಿಜಯ್ ಸ್ಥಳಕ್ಕೆ ಬರುತ್ತಿದ್ದಂತೆ ಗಲಾಟೆ ಶುರುಮಾಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ವಿಜಯ್ ಹೊಟ್ಟೆಗೆ ಚಾಕು ಇರಿಯಲಾಗಿದ್ದು, ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಜೆ.ಸಿ.ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇನ್ನು ಪ್ರಕರಣ ಸಂಬಂಧ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದ್ದು, ಬೈಕ್ ಟಚ್ ಆದ ವಿಚಾರ ಕೊಲೆಗೆ ಕೇವಲ ಪ್ರಚೋದನೆ ಮಾತ್ರ. ಹುಡುಗಿ ವಿಚಾರಕ್ಕೆ ಸಂಬಂಧಿಸಿ ಆರೋಪಿ ಕಿರಣ್ ಮತ್ತು ವಿಜಯ್ ನಡುವೆ ಹಿಂದಿನಿಂದಲೂ ದ್ವೇಷವಿತ್ತು. ವಿಜಯ್ಗೆ ಅದಾಗಲೇ ಮದುವೆಯಾಗಿದ್ದರೂ ಮಾಜಿ ಪ್ರೇಯಸಿಗೆ ಕಾಟ ನೀಡುತ್ತಿದ್ದ. ಆಕೆ ಈಗ ಕಿರಣ್ ಲವರ್ ಆಗಿದ್ದು, ಇದೇ ಕಾರಣಕ್ಕೆ ವಿಜಯ್ ಮೇಲೆ ಕಿರಣ್ಗೆ ಕೋಪ ಇತ್ತು. ಹೀಗಾಗಿ ನಿನ್ನೆ ರಾತ್ರಿಯ ಗಲಾಟೆ ನೆಪದಲ್ಲಿ ಇಂದು ಅಟ್ಟಾಡಿಸಿ ಕೊಲೆ ಮಾಡಲಾಗಿದೆ ಎಂಬ ಮಾತುಗಳು ಕೂಡ ಕೇಳಿಬಂದಿದೆ.
ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ತಿಳಿದು ಬರಬೇಕಾಗಿದೆ.



