ಚಿತ್ರದುರ್ಗ: ಹಳ್ಳದಲ್ಲಿ ಎಮ್ಮೆ ಮೈ ತೊಳೆಯಲು ಹೋಗಿದ್ದ ಯುವಕ ಕಾಲುಜಾರಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೊರ್ಲತ್ತು ಗ್ರಾಮದ ಸಮೀಪ ನಡೆದಿದೆ.
ಮೃತ ಯುವಕನನ್ನು ಗೊರ್ಲತ್ತು ಗ್ರಾಮದ ವೆಂಕಟೇಶ್ (23) ಎಂದು ಗುರುತಿಸಲಾಗಿದೆ. ಎಮ್ಮೆಗಳಿಗೆ ನೀರು ಕುಡಿಸಿ ಬಳಿಕ ಹಳ್ಳದಲ್ಲಿ ಮೈ ತೊಳೆಯುವ ವೇಳೆ ಕಾಲು ಜಾರಿ ನೀರಿಗೆ ಬಿದ್ದ ವೆಂಕಟೇಶ್, ನೀರಿನ ಆಳಕ್ಕೆ ಕೊಚ್ಚಿ ಹೋಗಿದ್ದು, ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಸಂಜೆಯಾದರೂ ವೆಂಕಟೇಶ್ ಮನೆಗೆ ಮರಳದ ಹಿನ್ನೆಲೆ ಆತಂಕಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹಳ್ಳದ ಬಳಿ ತೆರಳಿ ಶೋಧ ನಡೆಸಿದ್ದಾರೆ. ಈ ವೇಳೆ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಹಳ್ಳದಲ್ಲಿ ಮುಳುಗಿದ್ದ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.
ಈ ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಗ್ರಾಮದಲ್ಲಿ ದುಃಖದ ವಾತಾವರಣ ಆವರಿಸಿದೆ.



