ವಿಜಯಸಾಕ್ಷಿ ಸುದ್ದಿ, ಧಾರವಾಡ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಆಕಾಶವಾಣಿಯ ತಮ್ಮ ‘ಮನ್ ಕಿ ಬಾತ್’ ಮೂಲಕ ದೇಶದ ಕೊನೆಯ ತುದಿ ಹಾಗೂ ಅಂತಿಮ ವ್ಯಕ್ತಿಯನ್ನು ತಲುಪಲು ಸಾಧ್ಯವಾಗಿದೆ ಎಂದು ಅಭಿಮಾನದಿಂದ ಸ್ಮರಿಸಿ, ಶ್ಲಾಘಿಸಿರುವುದು, ಆಕಾಶವಾಣಿಯ ಸರ್ವಶಕ್ತತೆ ಮತ್ತು ಸರ್ವವ್ಯಾಪಕತೆಯನ್ನು ಬಿಂಬಿಸುತ್ತದೆ ಎಂದು ಕೇಂದ್ರದ ನವ ಹಾಗೂ ನವೀಕರಿಸಬಹುದಾದ ಇಂಧನಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ‘ಸೃಜನಾ’ ಡಾ. ಅಣ್ಣಾಜಿರಾವ ಸಿರೂರ ರಂಗಮಂದಿರದಲ್ಲಿ ಆಯೋಜಿಸಿದ್ದ ಆಕಾಶವಾಣಿ ಧಾರವಾಡ ಕೇಂದ್ರದ ಅಮೃತ ಮಹೋತ್ಸವದ ಪ್ರಧಾನ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ, ‘ಆಕಾಶವಾಣಿಯ ಅಮೃತ ಘಳಿಗೆ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಆಕಾಶವಾಣಿ ‘ಸಿಗ್ನೇಚರ್ ಟ್ಯೂನ್’ ಮಾಧುರ್ಯಕ್ಕೆ ಮನಸೋಲದವರಿಲ್ಲ. ಶ್ರೀಸಾಮಾನ್ಯನ ಹೃದಯವನ್ನು ತಲುಪಿ, ಜ್ಞಾನವನ್ನು ಬೆಳಗಿದ ರೀತಿ ವಿಶೇಷವಾದದ್ದು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು, ಧಾರವಾಡ ಆಕಾಶವಾಣಿಯ ಅಮೃತ ಮಹೋತ್ಸವಕ್ಕೆ ತಮ್ಮ ಶುಭಾಶಯ ಸಂದೇಶ ತಿಳಿಸಿದ್ದು, ಸದ್ಯದಲ್ಲೇ ಭೇಟಿ ನೀಡಲಿದ್ದಾರೆ ಎಂದರು.
ಇನ್ನೋರ್ವ ಅಥಿತಿ, ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಪಿ.ಎಲ್. ಪಾಟೀಲ ಮಾತನಾಡಿ, ಧಾರವಾಡ ಆಕಾಶವಾಣಿ ಮೂಲಕ ರೈತರಿಗೆ ವೈಜ್ಞಾನಿಕ ಕೃಷಿಯ ಮಾಹಿತಿಯನ್ನು ‘ಕೃಷಿ ಶೋಧನೆ-ಸಾಧನೆ’ ಕಾರ್ಯಕ್ರಮದ ಮುಖಾಂತರ ಹಂಗಾಮಿಗೆ ಅನುಗುಣವಾಗಿ ನೀಡಲು, ಇಂಗ್ಲೀಷ್ ಬಲ್ಲ ತಜ್ಞರಿಗೆ, ವಿಜ್ಞಾನಿಗಳಿಗೆ, ಕೃಷಿ ಸಲಹೆಗಳು ಕನ್ನಡ ಕಲಿಸಿವೆ ಎಂದು ಅಭಿಮಾನದಿಂದ ಹೇಳಿದರು.
ಕಾರ್ಯಕ್ರಮ ಮುಖ್ಯಸ್ಥ ಶರಣಬಸವ ಚೋಳಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಕಾಶವಾಣಿ ಧಾರವಾಡ ಕೇಂದ್ರದ ಉಪ ಮಹಾನಿರ್ದೇಶಕ ಕೆ.ಅರುಣ್ ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ನಿಲಯದ ಹಿರಿಯ ಕಲಾವಿದರಾದ ಸದಾಶಿವ ಐಹೊಳಿ ಪ್ರಾರ್ಥಿಸಿದರು. ಕಾರ್ಯಕ್ರಮ ನಿರ್ವಾಹಕಿ ಮಂಜುಳಾ ಪುರಾಣಿಕ ಸ್ವಾಗತಿಸಿದರು. ಹಿರಿಯ ಉದ್ಘೋಷಕಿ ಮಾಯಾ ರಾಮನ್ ನಿರೂಪಿಸಿದರು.
ಆಕಾಶವಾಣಿ ಕಲಾವಿದರಾದ ಸದಾಶಿವ ಪಾಟೀಲ ಹಾಗೂ ಡಾ. ಶ್ರೀರಾಮ ಕಾಸರ ಶರಣಬಸವ ಚೋಳಿನ ಅವರು ರಚಿಸಿದ ‘ರಾಗ ತರಂಗ, ನಾದ ತರಂಗ ಹೇಳ ತೀರದ ಆನಂದ’ ಹಾಗೂ ಆನಂದ ಪಾಟೀಲ ಅವರು ರಚಿಸಿದ ‘ಸಂಭ್ರಮವಿದು’ ಅಮೃತ ಮಹೋತ್ಸವ ಆಶಯ ಗೀತೆಯನ್ನು, ರೇಖಾ ದಿನೇಶ ಹೆಗಡೆ ಹಾಗೂ ಶೃತಿ ಭಟ್ ಪ್ರಸ್ತುತಪಡಿಸಿದರು. ಶ್ರೀಹರಿ ದಿಗ್ಗಾವಿ ತಬಲಾ ಸಾಥ್ ಹಾಗೂ ಜಾಕೋಬ್ ದೇವಾನಂದ ಕೀಬೋರ್ಡ್ ಸಾಥ್ ನೀಡಿದರು.
ಬೆಳಗಾವಿ ಜಿಲ್ಲೆ ಬೈಲಹೊಂಗಲದ ಮಲ್ಲಮ್ಮ ಮೇಗೇರಿ ಹಾಗೂ ತಂಡ ಶ್ರೀ ಕೃಷ್ಣ ಪಾರಿಜಾತದ ಗೀತೆಗಳನ್ನು, ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಗಣೇಶ ಶಿಂಧೆ ಹಾಗೂ ತಂಡ ಗೋಂಧಳಿ ಹಾಗೂ ತುಮ್ಮರಗುದ್ದಿಯ ಮರೆಪ್ಪಾ ದಾಸರ ಹಾಗೂ ತಂಡದಿಂದ ತತ್ವ ಪದಗಳ ಗಾಯನ ಕಛೇರಿ ಮನಸೂರೆಗೊಂಡಿತು.
ಧಾರವಾಡದ ಹಿರಿಯ ಪಿಟೀಲು ಕಲಾವಿದರಾದ ಪಂ. ಬಿ.ಎಸ್. ಮಠ ಹಾಗೂ ವಿದುಷಿ ಅಕ್ಕಮಹಾದೇವಿ ಹಿರೇಮಠ ವಾಯೋಲಿನ್ ಜುಗಲ್‌ಬಂದಿಯಲ್ಲಿ ‘ರಾಗ ಶ್ಯಾಮ ಕಲ್ಯಾಣ್’ ಪ್ರಸ್ತುತಪಡಿಸಿದರು. ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ ತಬಲಾ ಸಾಥ್ ನೀಡಿದರು. ಪದ್ಮಶ್ರೀ ಪಂ.ಎಂ. ವೆಂಕಟೇಶಕುಮಾರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಛೇರಿ ಪ್ರಸ್ತುತ ಪಡಿಸಿದರು. ಶ್ರೀಧರ ಮಾಂಡ್ರೆ ತಬಲಾ ಸಾಥ್, ಸಾರಂಗ ಕುಲಕರ್ಣಿ ಹಾರ್ಮೋನಿಯಂ ಸಾಥ್ ನೀಡಿದರು.
ಹುಬ್ಬಳ್ಳಿಯ ಡಾ. ಗೋವಿಂದ ಮಣ್ಣೂರ ರಚಿಸಿದ ನಗೆ ನಾಟಕ ‘ಮೊಬೈಲ್ ಮಾವ’ ಆಕಾಶವಾಣಿಯ ಹಿರಿಯ ಉದ್ಘೋಷಕಿ ಸುರೇಖಾ ಸುರೇಶ ನಿರ್ದೇಶನದಲ್ಲಿ ಮೂಡಿಬಂತು. ಡಾ.ಚೇತನ್ ನಾಯಕ, ಡಾ.ಶಶಿಧರ ನರೇಂದ್ರ, ರವಿ ಕುಲಕರ್ಣಿ, ಅನಂತ ದೇಶಪಾಂಡೆ, ವೀರಣ್ಣ ಪತ್ತಾರ, ನವೀನ ಮಹಾಲೆ, ಆರತಿ ದೇವಶಿಖಾಮಣಿ ಹಾಗೂ ಸನ್ಮತಿ ಅಂಗಡಿ ಪಾತ್ರಗಳನ್ನು ನಿರ್ವಹಿಸಿದರು. ರವಿ ರಸಾಳಕರ ನಾಟಕಕ್ಕೆ ಸಂಗೀತ ಸಂಯೋಜಿಸಿದರು. ಸಂತೋಷ ಗಜಾನನ ಮಹಾಲೆ ಪ್ರಸಾದನ ಹಾಗೂ ಬೆಳಕಿನ ವ್ಯವಸ್ಥೆ ನಿರ್ವಹಿಸಿದರು.
ಅಥಿತಿಗಳಾಗಿ ಪಾಲ್ಗೊಂಡಿದ್ದ ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಅಂಕಲಗಿಯಲ್ಲಿ ತಮಗೆ, ವಿಶ್ವಾಸಾರ್ಹ ಸುದ್ದಿ, ಮಾಹಿತಿ ಮತ್ತು ಮನೋರಂಜನೆಗೆ ಆಧಾರವಾಗಿದ್ದು ಧಾರವಾಡ ಆಕಾಶವಾಣಿ ಕೇಂದ್ರ. ಪ್ರದೇಶ ಸಮಾಚಾರ ಈಗಲೂ ತಮಗೆ ಅಚ್ಚುಮೆಚ್ಚು. ಬಿ.ವಿ. ಭೂಮರಡ್ಡಿಯವರು ಪೇಟೆ ದರ, ಎಣ್ಣೆ ದರ ಹಾಗೂ ದಿನಸಿ ದರಗಳಿಗಾಗಿ, ಆಕಾಶವಾಣಿಯನ್ನು ಆಶ್ರಯಿಸಿದ್ದು ಉಲ್ಲೇಖನೀಯ. ಪಂ. ಭೀಮಸೇನ ಜೋಶಿ ಅವರು ತಮಗೆ ತಿಳಿಸಿದಂತೆ, ಮರಾಠಿ ನಾಟ್ಯ ಸಂಗೀತಕ್ಕೆ ಮೂಲ ಧಾರವಾಡದ ಜಾನಪದವಾಗಿದ್ದು, ಈ ಕಲೆ ಉಳಿದು, ಆ ಕಲಾವಿದರು ನಾಡನ್ನು ಬೆಳಗಲು ಸಾಧ್ಯವಾಗಿದ್ದು ಧಾರವಾಡ ಆಕಾಶವಾಣಿಯಿಂದಾಗಿ ಎಂದು ನುಡಿದರು.