ಅಂಚೆ ಕಚೇರಿಗಳ ಬಾಗಿಲು ಮುಚ್ಚಿಸಿದ BBMP ಕ್ರಮಕ್ಕೆ ಎಎಪಿ ತೀವ್ರ ವಿರೋಧ

0
Spread the love

ಬೆಂಗಳೂರು: ನಗರದ ಸೇಂಟ್ ಜಾನ್ಸ್ ರಸ್ತೆ ಹಾಗೂ ವಸಂತನಗರದ ಅಂಚೆ ಕಚೇರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದು, ಕೂಡಲೇ ಅದನ್ನು ತೆರವು ಮಾಡಿ ಅಂಚೆ ಕಚೇರಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್ ಆಗ್ರಹಿಸಿದ್ದಾರೆ.

Advertisement

ಮಾಧ್ಯಮಗಳ ಜೊತೆ ಮಾತನಾಡಿದ ಡಾ. ಸತೀಶ್ ಕುಮಾರ್, ಬಿಬಿಎಂಪಿ ಕಟ್ಟಡದಲ್ಲಿರುವ ಅಂಚೆ ಕಚೇರಿಗಳು ಬಾಡಿಗೆ ಕಟ್ಟುತ್ತಿಲ್ಲ ಎನ್ನುವ ಕಾರಣ ನೀಡಿ ಅಧಿಕಾರಿಗಳು ಬಾಗಿಲು ಹಾಕಿಸುತ್ತಿರುವ ಕ್ರಮ ಖಂಡನೀಯ. ಭಾರತೀಯ ಅಂಚೆ ಇಲಾಖೆ ಪ್ರಪಂಚದಲ್ಲೇ ಅತಿ ದೊಡ್ಡ ಸರ್ಕಾರಿ ಅಂಚೆ ಇಲಾಖೆ ಎನ್ನುವ ಹೆಗ್ಗಳಿಕೆ ಪಡೆದಿದೆ. ಇದು ಭಾರತದ ಪರಂಪರೆ ಹಾಗೂ ಇತಿಹಾಸದ ಭಾಗವಾಗಿದೆ. ಕಡಿಮೆ ವೆಚ್ಚದಲ್ಲಿ ಸಾರ್ವಜನಿಕರಿಗೆ ಅಂಚೆ ಸೇವೆ ಒದಗಿಸುತ್ತಿದೆ. ಇಂತಹ ಸೇವಾ ವಲಯದ ಕಚೇರಿಯನ್ನು ಬಾಡಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಮುಚ್ಚಿಸಿರುವುದು ವಿಷಾದನೀಯ ಎಂದರು.

ಅಂಚೆ ಕಚೇರಿಗಳ ಕಟ್ಟಡಗಳ ಮೇಲೆ ತೆರಿಗೆ ಹಾಕದೆ, ಶುಲ್ಕ ವಸೂಲಿ ಮಾಡದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ಯಾರೋ ಉದ್ಯಮಿಗಳಿಗೆ, ಪ್ರಭಾವಿಗಳಿಗೆ, ರಾಜಕಾರಣಿಗಳಿಗೆ ಬೇಕಾದಷ್ಟು ಭೂಮಿ, ಕಟ್ಟಡಗಳನ್ನು ಧಾರೆಯೆರೆದು ಕೊಡುತ್ತಿರುವಾಗ ಜನಸಮಾನ್ಯರಿಗೆ ನೆರವಾಗುವ ಅಂಚೆಕಚೇರಿಗಳಿಂದ ಬಾಡಿಗೆ ತೆಗೆದುಕೊಳ್ಳದಿದ್ದರೆ ಸರ್ಕಾರಕ್ಕೆ ಅಂತಹ ದೊಡ್ಡ ನಷ್ಟವೇನೂ ಸಂಭವಿಸುವುದಿಲ್ಲ ಎಂದರು.

ಕೇಂದ್ರದ ಬಿಜೆಪಿ ಸರ್ಕಾರವು ಜನಸ್ನೇಹಿ ಅಂಚೆ ಇಲಾಖೆಗಳನ್ನು ಈ ರೀತಿಯ ಅನಾಥ ಹಾಗೂ ಮತದೃಷ್ಟ ಪರಿಸ್ಥಿತಿಗೆ ತಳ್ಳಿ ತನ್ನ ಜವಾಬ್ದಾರಿಯನ್ನು ಮರೆತಿರುವ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಬಿಬಿಎಂಪಿ ಮುಚ್ಚಿಸಿರುವ ಅಂಚೆ ಕಚೇರಿಗಳ ಬಾಗಿಲನ್ನು ತಕ್ಷಣ ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಡಾ.ಸತೀಶ್  ಆಗ್ರಹ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here