ನಾರ್ಥಂಪ್ಟನ್: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ 6ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು ಇಂಡಿಯಾ ಚಾಂಪಿಯನ್ಸ್ ವಿರುದ್ಧ 88 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಗೆದ್ದ ಯುವರಾಜ್ ಸಿಂಗ್ ನಾಯಕತ್ವದ ಭಾರತ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತು. ಆರಂಭಿಕ ಬ್ಯಾಟರ್‌ಗಳಾದ ಹಾಶಿಮ್ ಆಮ್ಲಾ (22) ಮತ್ತು ರುಡಾಲ್ಫ್ (24) ಉತ್ತಮ ಆರಂಭ ಒದಗಿಸಿದರು. ಸರೆಲ್ ಎರ್ವಿ 15 ರನ್‌ಗಳಿಸಿ ಔಟಾದ ನಂತರ, ಕಣಕ್ಕಿಳಿದ ನಾಯಕ ಎಬಿ ಡಿವಿಲಿಯರ್ಸ್ ಪಂದ್ಯದಲ್ಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.
ಎಬಿಡಿಯ 30 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 3 ಫೋರ್ ಒಳಗೊಂಡ 63 ರನ್‌ಗಳ ಸಿಡಿಲು ಅರ್ಧಶತಕದ ನೆರವಿನಿಂದ, ಸೌತ್ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಬಾರಿಸಿತು.
209 ರನ್ ಗುರಿ ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿತು. ಟಾಪ್ ಆರ್ಡರ್ ತತ್ತರಿಸಿ 10 ಓವರ್‌ಗಳಲ್ಲಿ ಕೇವಲ 66 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಉತ್ತಪ್ಪ (2), ಧವನ್ (1), ರೈನಾ (16), ರಾಯುಡು (0), ಯೂಸುಫ್ ಪಠಾಣ್ (5) ಮತ್ತು ಇರ್ಫಾನ್ ಪಠಾಣ್ (10) ವಿಕೆಟ್ ಕಳೆದುಕೊಂಡಿದ್ದರು.
18.2 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಭಾರತ ತಂಡವು 111 ರನ್ ಗಳಿಸಿದ್ದಾಗ, ಫ್ಲಡ್ ಲೈಟ್ ಸಮಸ್ಯೆಯಿಂದ ಪಂದ್ಯ ಸ್ಥಗಿತಗೊಳಿಸಲಾಯಿತು. ಬಳಿಕ ಡಕ್‌ವರ್ಥ್-ಲೂಯಿಸ್ ನಿಯಮದ ಪ್ರಕಾರ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವನ್ನು 88 ರನ್‌ಗಳ ಗೆಲುವು ದಾಖಲಿಸಿದೆ.


