ನಾಗಪುರ: ಅಭಿಷೇಕ್ ಶರ್ಮಾ ಮತ್ತು ರಿಂಕು ಸಿಂಗ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 48 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದಿದೆ. ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. 27 ರನ್ಗಳಾಗುವಷ್ಟರಲ್ಲಿ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಔಟಾದರು. ಬಳಿಕ ಅಭಿಷೇಕ್ ಶರ್ಮಾ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಮೂರನೇ ವಿಕೆಟ್ಗೆ 47 ಎಸೆತಗಳಲ್ಲಿ 99 ರನ್ಗಳ ಅಮೂಲ್ಯ ಜೊತೆಯಾಟವಾಡಿದರು.
ಸೂರ್ಯಕುಮಾರ್ ಯಾದವ್ 32 ರನ್ (22 ಎಸೆತ, 4 ಬೌಂಡರಿ, 1 ಸಿಕ್ಸ್) ಮತ್ತು ಹಾರ್ದಿಕ್ ಪಾಂಡ್ಯ 25 ರನ್ (16 ಎಸೆತ, 3 ಬೌಂಡರಿ, 1 ಸಿಕ್ಸ್) ಗಳಿಸಿ ಔಟಾದರು. ಆದರೆ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ 35 ಎಸೆತಗಳಲ್ಲಿ 84 ರನ್ (5 ಬೌಂಡರಿ, 8 ಸಿಕ್ಸ್) ಚಚ್ಚಿದರು. 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು ನಂತರದ 15 ಎಸೆತಗಳಲ್ಲಿ 34 ರನ್ ಸೇರಿಸಿದರು. ಕೊನೆಯಲ್ಲಿ ರಿಂಕು ಸಿಂಗ್ ಅಜೇಯ 44 ರನ್ (20 ಎಸೆತ, 4 ಬೌಂಡರಿ, 3 ಸಿಕ್ಸ್) ಗಳಿಸಿ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 238 ರನ್ಗಳಿಗೆ ಏರಿಸಿದರು.
239 ರನ್ಗಳ ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಆರಂಭದಲ್ಲೇ 1 ರನ್ಗೆ 2 ವಿಕೆಟ್ ಕಳೆದುಕೊಂಡಿತು. ಆದರೂ ಗ್ಲೆನ್ ಫಿಲಿಪ್ಸ್ ಮತ್ತು ಮಾರ್ಕ್ ಚಾಪ್ಮನ್ ಹೋರಾಟ ನೀಡಿದರು. ಫಿಲಿಪ್ಸ್ 78 ರನ್ (40 ಎಸೆತ, 4 ಬೌಂಡರಿ, 6 ಸಿಕ್ಸ್) ಹಾಗೂ ಚಾಪ್ಮನ್ 39 ರನ್ (24 ಎಸೆತ, 4 ಬೌಂಡರಿ, 2 ಸಿಕ್ಸ್) ಹೊಡೆದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ಗಳಿಗೆ ಸೀಮಿತವಾಯಿತು. ಕ್ರಮೇಣ ಭಾರತ ಗೆದ್ದು ಬೀಗಿದೆ.



