2025ರ ಏಷ್ಯಾಕಪ್‌ನಲ್ಲಿ ಟೀಮ್ ಇಂಡಿಯಾದ ಬ್ಯಾಟರ್ ಅಭಿಷೇಕ್ ಶರ್ಮಾ ಭರ್ಜರಿ ದಾಖಲೆ ಬರೆದಿದ್ದಾರೆ.
ಶುಕ್ರವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಅರ್ಧಶತಕ ಬಾರಿಸಿರುವ ಅವರು, ಟಿ20 ಏಷ್ಯಾಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ಮತ್ತು ವಿರಾಟ್ ಕೊಹ್ಲಿ ದಾಖಲೆ ಮುರಿದು, 282ಕ್ಕೂ ಹೆಚ್ಚು ರನ್ ಕಲೆಹಾಕಿ ಎಲೈಟ್ ಕ್ಲಬ್ ಸೇರಿದ್ದಾರೆ.
ಅಭಿಷೇಕ್ ಇದುವರೆಗೆ ಟೂರ್ನಮೆಂಟ್‌ನಲ್ಲಿ 282 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ, ಇದು ಟಿ20 ಏಷ್ಯಾಕಪ್‌ನ ಒಂದೇ ಆವೃತ್ತಿಯಲ್ಲಿ ಯಾವುದೇ ಬ್ಯಾಟ್ಸ್‌ಮನ್ ಗಳಿಸಿದ ಅತಿ ಹೆಚ್ಚು ರನ್‌ಗಳಾಗಿದೆ. ಇದಕ್ಕೂ ಮೊದಲು, ಈ ದಾಖಲೆಯನ್ನು 2022 ರ ಟಿ20 ಏಷ್ಯಾಕಪ್‌ನಲ್ಲಿ 281 ರನ್ ಗಳಿಸಿದ ಮೊಹಮ್ಮದ್ ರಿಜ್ವಾನ್ ಹೊಂದಿದ್ದರು.
ಅದೇ ವರ್ಷ ವಿರಾಟ್ ಕೊಹ್ಲಿ ಕೂಡ 276 ರನ್ ಬಾರಿಸಿದ್ದರು. ಅಭಿಷೇಕ್ ಈಗ ಅವರಿಬ್ಬರನ್ನೂ ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಟೂರ್ನಿಯಲ್ಲಿ 250 ರನ್ ಗಳಿಸುವ ಮೂಲಕ ಅಭಿಷೇಕ್ ಶರ್ಮಾ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಎಲೈಟ್ ಕ್ಲಬ್‌ಗೆ ಸೇರ್ಪಡೆಗೊಂಡಿದ್ದಾರೆ. ಟಿ20 ಟೂರ್ನಿಯಲ್ಲಿ ಭಾರತ ಪರ 250 ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಈ ಹಿಂದೆ, ರೋಹಿತ್ ಒಂದು ಟೂರ್ನಿಯಲ್ಲಿ 250 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ ನಾಲ್ಕು ಟಿ20 ಟೂರ್ನಿಗಳಲ್ಲಿ 250 ರನ್ ಗಳಿಸಿದ್ದಾರೆ. ಇದಲ್ಲದೆ, ಅಭಿಷೇಕ್ ಶರ್ಮಾ ಟಿ20 ಏಷ್ಯಾ ಕಪ್‌ನ ಒಂದೇ ಆವೃತ್ತಿಯಲ್ಲಿ 300 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ