ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ತಾಲೂಕಿನ ಮುತಿಗಿ ಗ್ರಾಮದ ಸಣ್ಣ ಹುಚ್ಚಪ್ಪನವರ ಕೊಟ್ರಪ್ಪನವರಿಗೆ ಸಂಬಂಧಿಸಿದ ಒಟ್ಟು 130 ಕುರಿಗಳಲ್ಲಿ 35 ಕುರಿಗಳು ಬುಧವಾರ ಮಧ್ಯಾಹ್ನ 1.30ರ ಹೊತ್ತಿಗೆ ನೀರು ಕುಡಿಸಲು ಹೋದ ವೇಳೆ ಸಾವನ್ನಪ್ಪಿವೆ.
ಅತಿಯಾದ ಮಳೆಯಾಗಿ ಕುರಿಗಳು ಹಲವಾರು ಕಾಯಿಲೆಗಳಿಗೆ ತುತ್ತಾಗಿದ್ದವು. ಹರಪನಹಳ್ಳಿಯ ಖಾಸಗಿ ಔಷಧಿ ಅಂಗಡಿಯೊಂದರಲ್ಲಿ ಔಷಧಿಯನ್ನು ತಂದು ಕುರಿಗಳಿಗೆ ಹಾಕಲಾಗಿತ್ತು. ಔಷಧಿಯನ್ನು ಹಾಕಿದ್ದರಿಂದಲೇ ಕುರಿಗಳು ಸಾವನ್ನಪ್ಪಿವೆ ಎಂಬ ಶಂಕೆ ವ್ಯಕ್ತವಾಗಿದ್ದು, ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಶೀಲಿಸಿದ್ದಾರೆ.
ಕುರಿಗಳ ಮಾಲೀಕ ಸಣ್ಣ ಹುಚ್ಚಪ್ಪನವರ ಕೊಟ್ರಪ್ಪ ಮಾತನಾಡಿ, ಮೊನ್ನೆ ದಿನ ಕುರಿಗಳಿಗೆ ಔಷಧಿ ನೀಡಲಾಗಿತ್ತು. ಅದನ್ನು ಬಿಟ್ಟರೆ ಬೇರೆ ಯಾವ ಕಾರಣವೂ ಇಲ್ಲ. ಒಟ್ಟು 130 ಕುರಿಗಳಲ್ಲಿ 60 ಕುರಿಗಳು ಅಸ್ವಸ್ಥಗೊಂಡಿದ್ದು, 35 ಕುರಿಗಳು ಸಾವನ್ನಪ್ಪಿವೆ. ಬದುಕಿರುವ ಕುರಿಗಳಿಗೆ ವೈದ್ಯರು ಔಷಧಿಯನ್ನು ನೀಡಿದ್ದಾರೆ ಸರ್ಕಾರವು ಸೂಕ್ತ ಪರಿಹಾರ ನೀಡದಿದ್ದರೆ ನಮ್ಮ ಬದುಕು ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡರು.
ಪಶುವೈದ್ಯಾಧಿಕಾರಿ ಶಿವಕುಮಾರ್ ಮಾತನಾಡಿ, ಔಷಧಿಯನ್ನು ಸೇವಿಸಿ ಸಾವನ್ನಪ್ಪಿರುವ ಬಗ್ಗೆ ಕುರಿಗಳ ಮಾಲೀಕರು ಸಂಶಯ ವ್ಯಕ್ತಪಡಿಸಿದ್ದಾರೆ. ಸತ್ತಿರುವ ಕುರಿಗಳ ಪರೀಕ್ಷೆ ನಡೆಸುತ್ತಿದ್ದೇವೆ. ವರದಿ ಬಂದ ನಂತರ ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದರು.