ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಬೈರತಿ ಬಸವರಾಜ್ ಅವರ ಆರೋಗ್ಯ ತಪಾಸಣೆ ವೇಳೆ ಇಸಿಜಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಹಿನ್ನೆಲೆ ಜಯದೇವ ಹೃದಯ ರೋಗ ಸಂಸ್ಥೆಯಲ್ಲಿ ಆಂಜಿಯೋಗ್ರಾಂ ನಡೆಸಲು ವೈದ್ಯರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇಸಿಜಿ ವರದಿಯಲ್ಲಿ ಅಸಾಮಾನ್ಯತೆ ಪತ್ತೆಯಾದ ಬೆನ್ನಲ್ಲೇ ಬೈರತಿ ಬಸವರಾಜ್ ಅವರನ್ನು ಐಸಿಯು ವಾರ್ಡ್‌ನ ಎ ಬ್ಲಾಕ್‌ಗೆ ದಾಖಲಿಸಿ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ ಆಂಜಿಯೋಗ್ರಾಂ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಇನ್ನೂ ಕೆಲವು ವೈದ್ಯಕೀಯ ಪರೀಕ್ಷೆಗಳನ್ನೂ ವೈದ್ಯರು ಕೈಗೊಳ್ಳಲಿದ್ದಾರೆ.
ಆಸ್ಪತ್ರೆಯಲ್ಲಿರುವ ಅವರ ಕೊಠಡಿ ಬಳಿ ಕಟ್ಟುನಿಟ್ಟಿನ ಭದ್ರತೆ ವಹಿಸಲಾಗಿದೆ. ಸಿಐಡಿ ಇನ್ಸ್‌ಪೆಕ್ಟರ್ ನೇತೃತ್ವದ ವಿಶೇಷ ತಂಡ ನಿಗಾವಹಿಸಿದ್ದು, ತಿಲಕ್ ನಗರ ಪೊಲೀಸರನ್ನೂ ಭದ್ರತೆಗೆ ನಿಯೋಜಿಸಲಾಗಿದೆ.
ಇದೀಗಾಗಲೇ ಬ್ಲಡ್ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಆಂಜಿಯೋಗ್ರಾಂ ವರದಿ ಬಂದ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.



