ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಾವೇರಿ ಜಿಲ್ಲಾ ರಟ್ಟಿಹಳ್ಳಿ ತಾಲೂಕಿನ ಮಾಸೂರ ಗ್ರಾಮದ ಸ್ವಾತಿ ರಮೇಶ ಬ್ಯಾಡಗಿ ಎಂಬ ಯುವತಿಯ ಹತ್ಯೆಯನ್ನು ಖಂಡಿಸಿ, ಪಟ್ಟಣದಲ್ಲಿ ಗುರುವಾರ ಎಬಿವಿಪಿ ನೇತೃತ್ವದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅರುಣ ಬಾರಕಿ ಮತ್ತು ನಗರ ಕಾರ್ಯದರ್ಶಿ ಅಭಿಷೇಕ ಉಮಚಗಿ ಮಾತನಾಡಿ, ಸ್ವಾತಿಯನ್ನು ಮಾಸೂರಿನ ಮುಸ್ಲಿಂ ಯುವಕ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ನಂತರ ಬೇರೊಂದು ಹುಡುಗಿಯೊಂದಿಗೆ ಮದುವೆ ನಿಶ್ಚಯವನ್ನು ಮಾಡಿಕೊಂಡಿದ್ದ. ಇದರ ನಡುವೆ ಯುವತಿಯ ಶವ ಸಿಕ್ಕಿದ್ದು, ಈ ಕೊಲೆಯ ಸುತ್ತ ಲವ್ ಜಿಹಾದ್‌ನ ಪ್ರಯತ್ನ ಎದ್ದು ತೋರುತ್ತಿದೆ. ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಬೇಕು, ಇದರಲ್ಲಿ ಸರಕಾರ ರಾಜಕೀಯ ಹಸ್ತಕ್ಷೇಪ ಮಾಡಬಾರದು. ಸ್ವಾತಿ ಬ್ಯಾಡಗಿ ಹತ್ಯೆಗೆ ನ್ಯಾಯವನ್ನು ಒದಗಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅಗ್ರಹಿಸಿದರು.
ತನಿಖೆಯಲ್ಲಿ ಪೊಲೀಸರು ಹಲವಾರು ರೀತಿಯ ಲೋಪವನ್ನು ಎಸಗುತ್ತಿದ್ದು, ತರಾತುರಿಯಲ್ಲಿ ಶವ ಯಾರದ್ದೆಂದು ಸರಿಯಾಗಿ ಗುರುತಿಸುವ ಮುನ್ನವೇ ಅಂತ್ಯಕ್ರಿಯೆ ನಡೆದಿರುವುದು ಬಹಳಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು. ತಹಸೀಲ್ದಾರ ವಾಸುದೇವ ವಿ.ಸ್ವಾಮಿ ಮನವಿ ಸ್ವೀಕರಿಸಿ ಸೂಕ್ತ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವದು ಎಂದು ಹೇಳಿದರು.
ತಾಲೂಕಾ ಸಂಚಾಲಕ ಪ್ರಕಾಶ ಕುಂಬಾರ, ಸಂಜನಾ ಪಾಟೀಲ್, ತೇಜಸ್ವಿನಿ ಕ್ಷತ್ರಿ, ಅಭಿಷೇಕ ಇಷನಗೌಡ್ರು, ಪೂರ್ಣಿಮಾ ಕ್ಷತ್ರಿ, ಅರವಿಂದ ಇಚ್ಚಂಗಿ, ವಿರೇಶ ಕುಂಬಾರ, ವಿನಾಯಕ ಹುಂಬಿ, ವಿನಾಯಕ ಕುಂಬಾರ, ಕಾರ್ತಿಕ ಹುನಗುಂದ, ವಿನಾಯಕ ಉಮಚಗಿ ಮತ್ತು ತಾಲೂಕಿನ ವಿವಿಧ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಪಟ್ಟಣದ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ, ಘೋಷಣೆ ಕೂಗುತ್ತ ತಹಸೀಲ್ದಾರ ಕಚೇರಿ ತಲುಪಿದರು. ತಹಸೀಲ್ದಾರರು ಕಚೇರಿಗೆ ಬರುವದು ವಿಳಂಬವಾಗಿದ್ದರಿಂದ ಕಾರ್ಯಕರ್ತರು ಕಚೇರಿಗೆ ನುಗ್ಗಲು ಯತ್ನಿಸಿದಾಗ ಕಾರ್ಯಕರ್ತರನ್ನು ಸಿಪಿಐ ನಾಗರಾಜ ಮಾಡಳ್ಳಿ, ಅಪರಾದ ವಿಭಾಗದ ಪಿಎಸ್‌ಐ, ಟಿ.ಕೆ. ರಾಠೋಡ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ತಡೆದು ಸಮಾಧಾನಪಡಿಸಿದರು.



