ಗುಣಾತ್ಮಕ ಶಿಕ್ಷಣದಿಂದ ಜಿಲ್ಲೆಯ ಫಲಿತಾಂಶ ಸುಧಾರಿಸಿ

0
Academic progress review meeting of high school and undergraduate college principals
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗುಣಮಟ್ಟದ ಶಿಕ್ಷಣದಿಂದ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶಗಳನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ಶಾಲೆ-ಕಾಲೇಜುಗಳ ಮುಖ್ಯಸ್ಥರೊಂದಿಗೆ ಶಾಲಾ-ಕಾಲೇಜುಗಳಲ್ಲಿನ ಮೂಲಭೂತ ಸೌಲಭ್ಯಗಳ ಚರ್ಚೆ ಹಾಗೂ ಗುಣಮಟ್ಟದ ಶಿಕ್ಷಣದ ವಿಚಾರ ಪ್ರಸ್ತಾಪ ಮಾಡುವ ಮೂಲಕ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಹಾಗೂ ಪದವಿ ಪೂರ್ವಕಾಲೇಜುಗಳ ಪರೀಕ್ಷಾ ಫಲಿತಾಂಶ ಸುಧಾರಿಸಿ ಮಾನವ ಸೂಚ್ಯಂಕ ಉನ್ನತೀಕರಿಸಲು ಸಾಧ್ಯವಾಗಲಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜು ಮುಖ್ಯಸ್ಥರ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ವರ್ಷದ ಶೈಕ್ಷಣಿಕ ಪ್ರಾರಂಭದ ಹಂತದಲ್ಲಿಯೇ ಮಹತ್ವದ ಬದಲಾವಣೆಗಳನ್ನು ಮಾಡುವ ಮೂಲಕ ಸುಧಾರಣೆಗೆ ಕ್ರಮ ವಹಿಸಬೇಕಾಗುತ್ತದೆ. ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರದ ಸುಧಾರಣೆಗೆ ಕ್ರಮ ಕೈಗೊಳ್ಳಲು ಸಮೀಕ್ಷಾ ತಂಡವನ್ನು ದೆಹಲಿ ರಾಜ್ಯಕ್ಕೆ ಅಲ್ಲಿನ ಶೈಕ್ಷಣಿಕ ಹಾಗೂ ಮೂಲಭೂತ ಸೌಲಭ್ಯಗಳ ಸ್ಥಿತಿಗತಿಗಳ ಕುರಿತು ಅವಲೋಕಿಸಲು ಕಳುಹಿಸಲಾಗಿತ್ತು. ಜಿಲ್ಲೆಯಲ್ಲಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಸ್ವಂತ ನಿವೇಶನವಿಲ್ಲದೇ ಇರುವ, ನಿವೇಶನ ಗುರುತಿಸಿದ್ದರೂ ಸ್ವಂತ ಕೊಠಡಿಗಳಿಲ್ಲದ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಇರುವ ಶಾಲೆ-ಕಾಲೇಜುಗಳ ಮಾಹಿತಿಯನ್ನು ಆಯಾ ಶಾಲಾ-ಕಾಲೇಜುಗಳ ಮುಖ್ಯಸ್ಥರು ಸ್ಪಷ್ಟವಾಗಿ ನೀಡಿದಲ್ಲಿ ಅವುಗಳನ್ನು ಸಂಗ್ರಹಿಸಿ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Academic progress review meeting of high school and undergraduate college principals

ಸಭೆಯಲ್ಲಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಶಾಲಾ ಮುಖ್ಯಸ್ಥರು ತಮ್ಮ ತಮ್ಮ ಶಾಲೆಯ ಸ್ವಂತ ಜಾಗದ ಸಮಸ್ಯೆ, ಕಟ್ಟಡದ ಸಮಸ್ಯೆ, ಮೂಲಭೂತ ಸೌಲಭ್ಯಗಳ ಸಮಸ್ಯೆ, ಮೈದಾನ ಸೌಲಭ್ಯ, ಬೋಧಕ ಸಿಬ್ಬಂದಿಗಳ ಕೊರತೆ ಹೀಗೆ ಹಲವು ಮಾಹಿತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಮುಂದಿಟ್ಟರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಶೈಕ್ಷಣಿಕ ಫಲಿತಾಂಶ ಉನ್ನತೀಕರಿಸುವಲ್ಲಿ ಗುಣಾತ್ಮಕ ಶಿಕ್ಷಣದ ಕುರಿತು ಚಿಂತನೆ ಮಾಡುವ ಅಗತ್ಯವಿದೆ.

ಶಿಕ್ಷಕರನ್ನು ಒಂದು ಕಡೆ ಸೇರಿಸಿ ಅವರ ಅಭಿಪ್ರಾಯಗಳನ್ನು ಒಗ್ಗೂಡಿಸಿ ಫಲಿತಾಂಶ ಸುಧಾರಣೆಗಾಗಿ ಚಿಂತನೆ ಮಾಡುವ ಆಲೋಚನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಮಾಡಿದ್ದಾರೆ. ಶಾಲಾ ಮಕ್ಕಳ ದಾಖಲು, ಹಾಜರು, ಕಲಿಕೆ ಸಮರ್ಪಕವಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜು ಮುಖ್ಯಸ್ಥರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಡಯಟ್ ಪ್ರಾಚಾರ್ಯ ಜಿ.ಎಲ್. ಬಾರಾಟಕ್ಕೆ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕುರ್ತಕೋಟಿ ಸೇರಿದಂತೆ ತಾಲೂಕಾ ಶಿಕ್ಷಣಾಧಿಕಾರಿಗಳು, ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜಿನ ಮುಖ್ಯಸ್ಥರು, ಗಣ್ಯರು ಹಾಜರಿದ್ದರು. ಶಿವಾನಂದ ಗಿಡ್ನಂದಿ ಕಾರ್ಯಕ್ರಮ ನಿರೂಪಿಸಿದರು.

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಕುರಿತು ಗಮನ ಹರಿಸಬೇಕು. ಪಿಯು ವಿದ್ಯಾರ್ಥಿಗಳ ದಾಖಲಾತಿ ಸಮರ್ಪಕವಾಗಿದ್ದು ಹಾಜರಾತಿ ಮಾತ್ರ ಕಡಿಮೆ ಇದ್ದಲ್ಲಿ ಅಂತಹ ಪಿಯು ಕಾಲೇಜುಗಳ ಮುಖ್ಯಸ್ಥರು ವಿದ್ಯಾರ್ಥಿಗಳ ಹಾಜರಾತಿಯ ಕಡೆ ನಿಗಾ ವಹಿಸಬೇಕು ಎಂದು ಸೂಚಿಸಿದರು.

ಶಾಲೆ, ಕಾಲೇಜುಗಳಲ್ಲಿ ಶೌಚಾಲಯಗಳ ಬಳಕೆ, ಅವುಗಳ ಸ್ವಚ್ಛತೆ ಹಾಗೂ ಸಮರ್ಪಕ ನಿರ್ವಹಣೆಯಾಗುತ್ತಿರುವ ಕುರಿತು ಶಾಲಾ ಮುಖ್ಯಸ್ಥರು ಗಮನ ಹರಿಸಬೇಕು. ನಿವೇಶನವಿಲ್ಲದ ಶಾಲೆಗಳಿಗೆ ಆಗಸ್ಟ್ ಮಾಸಾಂತ್ಯಕ್ಕೆ ನಿವೇಶನ ಗುರುತಿಸುವ ಕೆಲಸವಾಗಬೇಕು. ಅನುದಾನ ಕೊರತೆಯ ಕಾರಣದಿಂದ ಕಟ್ಟಡ ಕಟ್ಟಿಸಲು ಸಾಧ್ಯವಾಗದ ಶಾಲೆಗಳ ಕುರಿತು ಗಮನ ಹರಿಸಿ ಸೂಕ್ತ ಕ್ರಮ ಕೈಗೊಂಡು ಅಂತಹ ಶಾಲೆಗಳ ಕಟ್ಟಡ ಕಟ್ಟುವ ಕೆಲಸವನ್ನು ನವೆಂಬರ್ 14ರಂದು ಪ್ರಾರಂಭಿಸಲು ಕ್ರಮ ವಹಿಸಬೇಕು.
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.

 


Spread the love

LEAVE A REPLY

Please enter your comment!
Please enter your name here