ವಿಜಯಸಾಕ್ಷಿ ಸುದ್ದಿ, ಗದಗ: ಯುವಕರು ಗಾಂಧಿಯವರ ವಿಚಾರಗಳನ್ನು ಅಳವಡಿಸಿಕೊಂಡು ದೇಶದ ಪರಿವರ್ತನೆಯ ಕಡೆಗೆ ಶ್ರಮಿಸಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ತಿಳಿಸಿದರು.
ನಗರದ ಆರ್‌ಡಿಪಿಆರ್ ವಿಶ್ವವಿದ್ಯಾಲಯದ ಗ್ರಾಮ ಗಂಗೋತ್ರಿ ಕ್ಯಾಂಪಸ್‌ನಲ್ಲಿ ಮಂಗಳವಾರ ರಾಜ್ಯ ಎನ್.ಎಸ್.ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ 2024-25ನೇ ಸಾಲಿನ ರಾಜ್ಯಮಟ್ಟದ ಯುವಜನೋತ್ಸವ ಹಾಗೂ ಗಾಂಧೀಜಿಯವರ ಮೂಲ ಕೃತಿಗಳ ಅನುವಾದಿತ ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಗದಗ ಜಿಲ್ಲೆ ಸಂಗೀತ, ಸಾಂಸ್ಕೃತಿಕ ಸೇರಿದಂತೆ ಎಲ್ಲಾ ರಂಗಗಳಲ್ಲಿ ತನ್ನ ಛಾಪನ್ನು ಮೂಡಿಸಿದೆ. ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಸಹಕಾರ ಚಳುವಳಿಯ ಪರಿಕಲ್ಪನೆ ಉದಯವಾಗಿದೆ. ದೇಶದಲ್ಲಿ ಸ್ವಾತಂತ್ರ್ಯಯ ಹೋರಾಟ ನಿರ್ಮಾಣ ಮಾಡುವಲ್ಲಿ ಮುಂಬೈ ಪ್ರಾಂತ್ಯದಲ್ಲಿಯೇ ಗದದ ಜಿಲ್ಲೆಯು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು ಈ ಹಿಂದೆ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಕೇಂದ್ರ ಕಚೇರಿಯು ಗದಗನಲ್ಲಿ ನಾವೆಲ್ಲರೂ ಮರೆಯುವಂತಿಲ್ಲ. ಕನ್ನಡ ಸಾಹಿತ್ಯಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿರುವ ಪಂಪ, ರನ್ನ, ಕುಮಾರವ್ಯಾಸ, ಅತ್ತಿಮಬ್ಬೆ, ಚಾಮರಸ, ದುರ್ಗಸಿಂಹ, ಅಬ್ಬಯಕ್ಕ, ನಯಸೇನ ಇವರೆಲ್ಲರೂ ಗದಗ ಜಿಲ್ಲೆಯ ಕೊಡುಗೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯ. ಈಗಿನ ಆಧುನಿಕ ಸಾಹಿತ್ಯದಲ್ಲಿ ಆರ್.ಸಿ. ಹಿರೇಮಠ್, ಚನ್ನವೀರ್ ಕಣವಿ, ಗಿರಡ್ಡಿ ಗೋವಿಂದರಾಜು, ಸೋಮಶೇಖರ್ ಇಮ್ರಾಪುರ್, ಅಂದಾನಪ್ಪ ಮೇಟಿ ಹೀಗೆ ಹಲವರ ಕೊಡುಗೆಯಿದೆ ಎಂದರು.
ಮಹಾತ್ಮ ಗಾಂಧೀಜಿಯವರು ಹೇಳಿದಂತೆ ಶಾಂತಿ, ಸಹನೆ, ಪ್ರೀತಿ ಅಳವಡಿಸಿಕೊಂಡು ದ್ವೇಷ-ಅಸೂಯೆಯನ್ನು ಮರೆತು ಒಳ್ಳೆಯ ಮನಸ್ಥಿತಿಯೊಂದಿಗೆ ದೇಶ ನಿರ್ಮಾಣ ಮಾಡುವುದು ಎಲ್ಲ ಯುವಕರ ಕರ್ತವ್ಯ. ದೇಶದಲ್ಲಿರುವ ಅನೇಕ ಜ್ವಲಂತ ಸಮಸ್ಯೆಗಳನ್ನು ಸವಾಲುಗಳಾಗಿ ತೆಗೆದುಕೊಂಡು ಯುವಕರು ಕ್ರಾಂತಿಯ ಕಹಳೆಯನ್ನು ಊದಿ ಪರಿವರ್ತನೆಯ ರಾಷ್ಟ್ರ ನಿರ್ಮಾಣದಲ್ಲಿ ಒಮ್ಮತದಿಂದ ಕೆಲಸ ಮಾಡಬೇಕು ಎಂದು ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.
ವಿ.ಪ ಮಾಜಿ ಸಭಾಪತಿಗಳಾದ ವಿ.ಆರ್. ಸುದರ್ಶನ್ ಮಾತನಾಡಿ, ಎನ್‌ಎಸ್‌ಎಸ್ ಮತ್ತು ಎನ್‌ಸಿಸಿಯಂತಹ ತರಬೇತಿಗಳು ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವ ಸುಧಾರಿಸುತ್ತವೆ. ಯುವಕರು ದೇಶದ ಭವಿಷ್ಯ ನಿರ್ಮಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಹಾಗಾಗಿ ಅವರು ಕೇವಲ ತಮ್ಮ ಹಕ್ಕುಗಳನ್ನು ಕೇಳದೆ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ದೇಶ ನಿರ್ಮಾಣದಲ್ಲಿ ಹಕ್ಕುಗಳಿಗೆ ನೀಡುವ ಪ್ರಾಮುಖ್ಯತೆಯನ್ನೇ ತಮ್ಮ ಜವಾಬ್ದಾರಿಗಳಿಗೂ ನೀಡಬೇಕು. ಗದಗ ಜಿಲ್ಲೆಯ ಅಭಿವೃದ್ಧಿಗೆ ದಿವಂಗತ ಕೆ.ಹೆಚ್. ಪಾಟೀಲರು ಹಾಗೂ ಎಚ್.ಕೆ. ಪಾಟೀಲರ ಕೊಡುಗೆ ಜಿಲ್ಲೆಯ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕುಲಪತಿ (ಪ್ರ) ಕುಲಸಚಿವರಾದ ಪ್ರೊ. ಡಾ. ಸುರೇಶ ನಾಡಗೌಡರ, ಡಿ. ಜೀವನಕುಮಾರ, ಡಾ. ಮೀನಾ ದೇಶಪಾಂಡೆ, ಪ್ರಶಾಂತ ಮೇರವಾಡೆ, ಡಾ. ಅಬ್ದುಲ್ ಮುಲ್ಲಾ ಸೇರಿದಂತೆ ಎನ್‌ಸಿಸಿ, ಎನ್‌ಎಸ್‌ಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ಪ್ರಕಾಶ ಮಾಚೇನಹಳ್ಳಿ ನಿರ್ವಹಿಸಿದರು.
ದಿನದಿಂದ ದಿನಕ್ಕೆ ಗ್ರಾಮೀಣ ವ್ಯವಸ್ಥೆಯ ಆರ್ಥಿಕತೆ ಸೊರಗುತ್ತಿದೆ. ಹಳ್ಳಿಗಳಲ್ಲಿ ಎತ್ತುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವ್ಯವಸಾಯ ಮಾಡುವ ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಎಲ್ಲರಿಗೂ ಆತಂಕ ತರುವ ವಿಷಯ. ಗಾಂಧೀಜಿಯವರ ಕನಸಿನಂತೆ ಗ್ರಾಮದ ಅಭಿವೃದ್ಧಿ ದೇಶದ ಅಭಿವೃದ್ಧಿಯಾಗಿದೆ. ಯುವಕರು ಕೆಲಸವನ್ನ ಅರಸಿ ನಗರಕ್ಕೆ ಹೋಗುತ್ತಿದ್ದಾರೆ. ಇದರ ಬಗ್ಗೆ ಗಂಭೀರವಾದ ಚಿಂತನೆ ನಡೆಯಬೇಕಿದೆ.
– ಎಚ್.ಕೆ. ಪಾಟೀಲ.
ಸಚಿವರು, ಗದಗ.