ತುಮಕೂರು:- ಬೀದಿ ದೀಪ ಆರಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಶಿಕ್ಷಕ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರಿನಲ್ಲಿ ಜರುಗಿದೆ. ಲೋಕೇಶ್ ರಾವ್ (35) ಮೃತ ದುರ್ದೈವಿ. ಗುಬ್ಬಿ ತಾಲ್ಲೂಕಿನ ಬ್ಯಾಡಗೆರೆ ಸರ್ಕಾರಿ ಶಾಲೆಯಲ್ಲಿ ಲೋಕೇಶ್ ರಾವ್ ಶಿಕ್ಷಕರಾಗಿದ್ದರು. ನಿನ್ನೆ ಮನೆ ಸಮೀಪದ ಬೀದಿದೀಪ ಆರಿಸಲು ಹೋದ ವೇಳೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.
ಬೀದಿ ದೀಪಗಳಿಗೆ ಅಳವಡಿಸಿರುವ ವೈರ್‌ಗೆ ಸ್ವಿಚ್ ಹಾಕುವಂತೆ ಅನೇಕ ಬಾರಿ ಸಂಬಂಧಿಸಿದ ಬೆಸ್ಕಾಂ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಸ್ವಿಚ್ ಅಳವಡಿಸುವುದಕ್ಕೆ ಬದಲಾಗಿ ವೈರನ್ನೇ ಒಂದಕ್ಕೊಂದು ಸ್ಪರ್ಶಿಸಿ ಇಟ್ಟಿರುವುದೇ ಅನಾಹುತಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಮೃತ ಶಿಕ್ಷಕನ ಸಾವಿನಿಂದ ಪತ್ನಿ, ಎರಡು ವರ್ಷದ ಹೆಣ್ಣು ಮಗು ಹಾಗೂ ಒಂದು ತಿಂಗಳ ಮಗು ಇದೀಗ ಅನಾಥವಾಗಿದೆ.
ಘಟನೆ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.