ಬೀದರ್:- 3ನೇ ಮಹಡಿಯಲ್ಲಿ ಪೇಂಟಿಂಗ್ ಮಾಡುವಾಗ ಅವಘಡ ಸಂಭವಿಸಿದ್ದು, ಆಯತಪ್ಪಿ ಬಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ವಿದ್ಯಾನಗರದಲ್ಲಿ ನಡೆದಿದೆ.
24 ವರ್ಷದ ಇಮಾವೇಲ್ ಮೃತ ದುರ್ದೈವಿ. ಮೃತ ದೇಹವನ್ನು ಬ್ರೀಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಯುವಕ ಮೂರನೇ ಮಹಡಿಗೆ ಹೋಗುವುದಿಲ್ಲ ಎಂದು ಹೇಳಿದ್ದರೂ ಕೂಡ ಒತ್ತಾಯ ಪೂರ್ವಕವಾಗಿ ಕಳುಹಿಸಿದ್ದಾರೆ. ಬಳಿಕ ಆತ ಪೇಟಿಂಗ್ ಮಾಡುವಾಗ ಮನೆಯ ಮಾಲೀಕ, ಗುತ್ತಿಗೆದಾರ ಹಾಗೂ ಎಂಜಿನಿಯರ್ ಸೇರಿ ಕಟ್ಟಡದ ಮೇಲಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮರಣೋತ್ತರ ಪರೀಕ್ಷೆ ವೇಳೆ ಶವವನ್ನು ನೋಡಲು ಒಳಗಡೆ ಬಿಡಿ ಎಂದು ಕುಟುಂಬಸ್ಥರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟಿದೆ. ಈ ವೇಳೆ ಶವಾಗಾರದ ಸಿಬ್ಬಂದಿಯೊಂದಿಗೆ ಕೂಡ ಗಲಾಟೆ ಮಾಡಿಕೊಂಡಿದ್ದಾರೆ. ಮನೆಯ ಮಾಲೀಕ, ಗುತ್ತಿಗೆದಾರ ಹಾಗೂ ಎಂಜಿನಿಯರ್‌ನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.