ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಬಟ್ಟೂರು ಗ್ರಾಮದ ಜಮೀನೊಂದರಲ್ಲಿ ಸಂಗ್ರಹಿಸಿದ್ದ ಗೋವಿನಜೋಳದ ತೆನೆ ಆಕಸ್ಮಿಕವಾಗಿ ಬೆಂಕಿಗೆ ಹುತಿಯಾಗಿದೆ. ಗ್ರಾಮದ ರೈತ ಸೋಮಣ್ಣ ವಡವಿ ಮತ್ತು ಶಂಕ್ರಪ್ಪ ವಡವಿ ಸಹೋದರು ತಮ್ಮ 13 ಎಕರೆ ಪ್ರದೇಶದಲ್ಲಿ ಬೆಳೆದ ಗೋವಿನ ಜೋಳ ತೆನೆಯನ್ನು ಕಟಾವು ಮಾಡಿಸಿ ದರ ಇಲ್ಲದ್ದರಿಂದ ಹೊಲದಲ್ಲಿಯೇ ಸಂಗ್ರಹಿಸಿದ್ದರು. ಸೋಮವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಗೋವಿನಜೋಳದ ತೆನೆಯ ರಾಶಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ರೈತರ ಬದುಕಿಗೆ ಆಸರೆಯಾಗಿದ್ದ ಲಕ್ಷಾಂತರ ರೂ ಮೌಲ್ಯದ ಮೆಕ್ಕೆ ಜೋಳದ ತೆನೆಯ ರಾಶಿ ಕಣ್ಣ ಮುಂದೆ ಯೇ ಸುಟ್ಟು ಭಸ್ಮವಾಗಿದ್ದನ್ನು ಕಂಡು ರೈತರು ಕಣ್ಣೀರು ಹಾಕಿದರು. ಸೇರಿದ್ದ ರೈತರು ಮತ್ತು ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರೂ ಪ್ರಯೋಜನವಾಗಲಿಲ್ಲ. ಸ್ಥಳಕ್ಕೆ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.



