ವಿಜಯಸಾಕ್ಷಿ ಸುದ್ದಿ, ಬೆಳಗಾವಿ: ಭೋವಿ, ಬಂಜಾರ, ಕೊರಮ, ಕೊರಚ ಜಾತಿಗಳ ಮಹಾ ಒಕ್ಕೂಟದಿಂದ 2011ರ ಜನಗಣತಿ ಆಧಾರದ ಮೇಲೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಂಗಡನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಡಿ.17ರಂದು ಬೆಳಗಾವಿ ಸುವರ್ಣಸೌಧದ ಎದುರಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯಲ್ಲಿ ಇಲಕಲ್ ವಿಜಯ ಮಹಾಂತೇಶ್ವರ ಶಾಖಾಮಠ ಲಿಂಗಸೂರಿನ ಪರಮಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು, ಬಿಜಾಪೂರ ತೋರವಿ ತಾಂಡಾ ಬಂಜಾರ ಪೀಠದ ಗೋಪಾಲ ಮಹಾರಾಜರು, ಸಂಡೂರಿನ ಶ್ರೀ ತಿಪ್ಪೇಸ್ವಾಮಿ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಗೊರಸೇನಾ ಸಂಘಟನೆಯ ರಾಜಾಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಸರ್ಕಾರ ಸರಿಯಾಗಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸಮೀಕ್ಷೆ ಮಾಡಬೇಕು. ಇದಾವುದನ್ನು ಪರಿಗಣಿಸದೆ ಈ ಹಿಂದಿನ 2011ರ ಜನಗಣತಿ ಆಧಾರದ ಮೇಲೆ ಒಳಮೀಸಲಾತಿ ವರ್ಗೀಕರಣ ಮಾಡಬಾರದು. 2024ರ ಜನಸಂಖ್ಯೆಗೆ ಅನುಗುಣವಾಗಿ 99 ಪರಿಶಿಷ್ಟ ಜಾತಿಗಳ ಸಹೋದರರಿಗೆ ಸಮಪಾಲು ನೀಡಬೇಕು. ಈ ಸಮುದಾಯಗಳು ಹೊಟ್ಟೆಪಾಡಿಗಾಗಿ ಗುಳೆ ಹೋಗುವುದು, ಕಲ್ಲು ಒಡೆಯುವುದು, ಕಟ್ಟಿಗೆ ಮಾರಿ ತಮ್ಮ ತುತ್ತಿನ ಚೀಲವನ್ನು ತುಂಬಲು ಹೆಣಗಾಡುತ್ತಿದ್ದಾರೆ. ಆಯೋಗ ಒಂದೆಡೆ ಕುಳಿತು ವರದಿ ಸಿದ್ಧಪಡಿಸಿದರೆ ಜನರ ವಾಸ್ತವಿಕ ಸಮಸ್ಯೆ ತಿಳಿಯದು. ಆಯೋಗ ತಾಂಡಾಗಳಿಗೆ, ಗ್ರಾಮಗಳಿಗೆ ಬರಬೇಕು, ವರದಿ ಸಿದ್ಧಪಡಿಸಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಅಖಿಲ ಕರ್ನಾಟಕ ಭೋವಿ ವಡ್ಡರ ವೇದಿಕೆ ರಾಜ್ಯಾಧ್ಯಕ್ಷ ವೈ. ಕೋಟ್ರೇಶ್ ಮಾತನಾಡಿ, ಪರಿಶಿಷ್ಟ ಜಾತಿಗೆ ಸೇರಿದ ಭೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯದ ಪ್ರತಿನಿಧಿಗಳನ್ನು ಒಳಗೊಂಡಿರುವ ಮಹಾ ಒಕ್ಕೂಟವು ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕಣ ಮಾಡಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ನೆಪವಾಗಿರಿಸಿಕೊಂಡು ರಾಜ್ಯ ಸರ್ಕಾರ ಅವೈಜ್ಞಾನಿಕ, ಅಸಂವಿಧಾನಿಕವಾಗಿ, ಕಾನೂನು ಬಾಹಿರ ಮತ್ತು ದ್ವೇಷ-ಆಶಾಂತಿಗೆ ಕಾರಣವಾಗಿರುವ ಒಳಮೀಸಲಾತಿ ವಿಂಗಡನೆಗೆ ಮುಂದಾಗಿರುವುದನ್ನು ವಿರೋಧಿಸುತ್ತೇವೆ.
ನಮಗೆ ಮೀಸಲಾತಿ ಕೊಟ್ಟಿರುವದು ಡಾ. ಬಾಬಾ ಸಾಹೇಬ ಅಂಬೇಡ್ಕರ್‌ರವರ ಸಂವಿಧಾನವೇ ಹೊರತು ಯಾವುದೇ ಸಮುದಾಯಗಳಲ್ಲ, ಯಾವುದೇ ಸರ್ಕಾರವಲ್ಲ, ಮೀಸಲಾತಿಯಿಂದ ನಮ್ಮನ್ನು ತಗೆಯುವ ಹಕ್ಕು ಯಾರಿಗೂ ಇಲ್ಲ. ಸರ್ಕಾರ ತರಾತುರಿಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಈ ಸಮಾಜದ ಮೀಸಲಾತಿ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ಮನವಿ ಸ್ವೀಕರಿಸಿ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿರುವ ಯಾವುದೇ ಸಮುದಾಯಕ್ಕೂ ಅನ್ಯಾಯ ಆಗುವದಿಲ್ಲ. ರಾಜ್ಯ ಸರ್ಕಾರ ನಿಮ್ಮ ಹಿತವನ್ನು ಕಾಯುತ್ತದೆ. ವೈಜ್ಞಾನಿಕವಾಗಿ, ವಾಸ್ತವಿಕ ದತ್ತಾಂಶಗಳನ್ನು ಸಂಗ್ರಹಿಸಿ ಒಳಮೀಸಲಾತಿ ಕುರಿತಾಗಿ ಮುಂದಿನ ತೀರ್ಮಾನವನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಚಂದ್ರಕಾಂತ್ ಚವ್ಹಾಣ, ಮಂಜುನಾಥ ಹಿರೇಮನಿ, ಸುಶೀಲಮ್ಮ, ಪಾಂಡು ಚವ್ಹಾಣ, ಸುನೀಲ ದೋತ್ರೆ, ಮೋಹನರಾಜ ಭಜಂತ್ರಿ, ರಾಮಚಂದ್ರ, ಶ್ರೀಕಾಂತ ಭಜಂತ್ರಿ, ಸುನಂದಾ, ಸುಮಂಗಲಾ, ಡಿ.ಟಿ. ಏಕಾಂತ, ಬಸವರಾಜ್ ಬಂಡಿವಡ್ಡರ, ರಾಜು ವಡ್ಡರ, ಅವಿನಾಶ, ಸುರೇಶ ಗಿಡ್ಡಪ್ಪ, ಲಕ್ಷ್ಮೀ ಬಂಡಿವಡ್ಡರ, ತುಕಾರಾಮ ಭಜಂತ್ರಿ, ಪಿ.ವೆಂಕಟೇಶ, ಮಂಜುನಾಥ ಹಳ್ಳಾಳ, ಶ್ರೀನಿವಾಸ ಅವರೋಳ್ಳಿ, ಆನಂದ ಅಂಗಡಿ, ಹನುಮಾ ನಾಯಕ, ಕೃಷ್ಣಜಿ ಚವ್ಹಾಣ, ಐ.ಎಸ್. ಪೂಜಾರ, ಶಿವಣ್ಣ ಲಮಾಣಿ, ಮೋಹನ ಭಜಂತ್ರಿ, ದಯಾನಂದ ಪವಾರ, ಅಂಜಯನೇಪ್ಪ ಕಟಗಿ, ಸೋಮು ಲಮಾಣಿ, ಸುಭಾಷ ಗುಡಿಮನಿ, ಜಾನು ಲಮಾಣಿ, ಪರಮೇಶ ನಾಯಕ, ಪಾಂಡುರAಗ ಪಮ್ಮಾರ, ಮಂಗಲೆಪ್ಪ ಲಮಾಣಿ, ವಾಸು ಲಮಾಣಿ, ಚಂದ್ರಾ ನಾಯಕ, ಕೆ.ಸಿ. ನಭಾಪುರ, ನೀಲು ರಾಠೋಡ, ಪುಂಡಲೀಕ ಲಮಾಣಿ, ಸುರೇಶ ಮಾಳಗಿಮನಿ, ಗಿರೀಶ, ಜಗದೀಶ, ಮಂಜುನಾಥ, ಶಿವಕುಮಾರ, ನಾಗರಾಜ, ಜ್ಯೋತಿ, ನಾಗಾಸರ, ತಿಪ್ಪೇಸ್ವಾಮಿ ಮುಂತಾದವರಿದ್ದರು.
ವಿಧಾನಸಭೆಯ ಉಪಸಭಾಪತಿಗಳಾದ ರುದ್ರಪ್ಪ ಲಮಾಣಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಡಾ. ಚಂದ್ರು ಲಮಾಣಿ, ಚಿಂಚೋಳಿಯ ಅವಿನಾಶ್ ಜಾಧವ್, ಹೂವಿನಹಡಗಲಿಯ ಕೃಷ್ಣ ನಾಯ್ಕ್, ಹಗರಿಬೊಮ್ಮನಹಳ್ಳಿಯ ನೇಮಿರಾಜ ನಾಯಕ, ಹೊಳಲ್ಕೆರೆಯ ಚಂದ್ರಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರ ತರಾತುರಿಯಲ್ಲಿ ಒಳಮೀಸಲಾತಿ ವಿಚಾರವಾಗಿ ಯಾವುದೇ ದುಡುಕು ತೀರ್ಮಾನವನ್ನು ತೆಗೆದುಕೊಳ್ಳಬಾರದು ಎಂದರು.